ಕೊರಟಗೆರೆ: ಪಟ್ಟಣದ ಹೃದಯಭಾಗದಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ (ಐಬಿ) ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆಯತ್ತ ಜಾರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಒಂದು ವರ್ಷದಿಂದ ಪ್ರವಾಸಿ ಮಂದಿರದಲ್ಲಿನ ಶೌಚಾಲಯ ವ್ಯವಸ್ಥೆ ಹದಗೆಟ್ಟಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಶೌಚಾಲಯದ ಪೈಪ್ಲೈನ್ಗಳು ಬ್ಲಾಕ್ ಆಗಿರುವುದು, ನಲ್ಲಿಗಳು ಮುರಿದಿರುವುದು ಹಾಗೂ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಪ್ರಮುಖ ಸಮಸ್ಯೆಗಳಾಗಿವೆ.
ಈ ಹಿಂದೆ ಲೋಕೋಪಯೋಗಿ ಇಲಾಖೆಯ ಎಇಇ ಜಗದೀಶ್ ಅವರ ಅವಧಿಯಲ್ಲಿ ಈ ಪ್ರವಾಸಿ ಮಂದಿರವನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗಿತ್ತು. ಮುಂಭಾಗದಲ್ಲಿ ಗಾರ್ಡನ್ ನಿರ್ಮಿಸಿ, ಜಿಲ್ಲೆಗೆ ಮಾದರಿಯ ಪ್ರವಾಸಿ ಮಂದಿರವನ್ನಾಗಿ ರೂಪಿಸಲಾಗಿತ್ತು. ಆದರೆ ನಂತರ ಬಂದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಮಂದಿರವು ಈಗ ಹಲವು ಸಮಸ್ಯೆಗಳಿಂದ ಬಳಲುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸರ್ಕಾರಿ ಹಾಗೂ ಖಾಸಗಿ ಕಾರ್ಯಗಳಿಗಾಗಿ ಕೊರಟಗೆರೆಗೆ ಬರುವ ಗಣ್ಯರು ಮತ್ತು ಸಾರ್ವಜನಿಕರು ಈ ಮಂದಿರವನ್ನು ಅವಲಂಬಿಸಬೇಕಾಗಿರುವ ಪರಿಸ್ಥಿತಿ ಇದೆ. ಆದರೆ, ರೂಮ್ ಬುಕ್ಕಿಂಗ್ ಮಾಡಲು ಬಂದವರಿಗೆ “ಶೌಚಾಲಯ ಸರಿಯಿಲ್ಲ, ಅಡ್ಜಸ್ಟ್ ಮಾಡಿಕೊಂಡರೆ ಬನ್ನಿ” ಎಂದು ಸಿಬ್ಬಂದಿಯೇ ಮುಂಚಿತವಾಗಿ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿಥಿಗಳನ್ನು ಗೌರವದಿಂದ ಬರಮಾಡಿಕೊಳ್ಳಬೇಕಾದ ಸ್ಥಳದಲ್ಲೇ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬರುತ್ತಿರುವುದು ಆಡಳಿತ ಯಾಂತ್ರಿಕತೆಗೆ ಹಿಡಿದ ಕೈಗನ್ನಡಿಯಾಗಿದೆ.
ಶೌಚಾಲಯ ಸಮಸ್ಯೆ ಕುರಿತು ಹಲವು ಬಾರಿ ದೂರು ನೀಡಿದರೂ, “ಅಂದಾಜು ಪಟ್ಟಿ ಸಿದ್ಧಪಡಿಸುತ್ತಿದ್ದೇವೆ” ಎಂಬ ನೆಪ ಹೇಳಿ ಅಧಿಕಾರಿಗಳು ಕಾಲಹರಣ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಸಣ್ಣ ದುರಸ್ತಿ ಕೆಲಸಕ್ಕೂ ವರ್ಷಗಳ ಕಾಲ ತೆಗೆದುಕೊಳ್ಳುತ್ತಿರುವುದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ಪ್ರಮುಖ ಸ್ಥಳದಲ್ಲಿರುವ ಈ ಪ್ರವಾಸಿ ಮಂದಿರದ ದುಸ್ಥಿತಿಯ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೂ ಗಮನಹರಿಸದಿರುವುದು ವಿಷಾದನೀಯ. ತಕ್ಷಣ ಸಮಸ್ಯೆ ಪರಿಹರಿಸಿ, ಮಂದಿರವನ್ನು ಪುನಃ ಸುಧಾರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.