ಕೊರಟಗೆರೆ: “ಪರೋಪಕಾರಿಯೇ ಪುಣ್ಯ, ಪರಪೀಡನೆಯೇ ಪಾಪ” ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರೆಂಡ್ಸ್ ಗ್ರೂಪ್ ಮತ್ತು ಜಗ್ಗೇಶ್ ಅಭಿಮಾನಿ ಬಳಗ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಪುರಸಭೆ ಮುಂಭಾಗದಲ್ಲಿ ಪ್ರೆಂಡ್ಸ್ ಗ್ರೂಪ್ ಹಾಗೂ ಜಗ್ಗೇಶ್ ಅಭಿಮಾನಿ ಬಳಗ ಆಯೋಜಿಸಿದ್ದ ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆ ಹಾಗೂ ಎಸ್ಎಸ್ಎಲ್ಸಿ–ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಎರಡು ಸಂಘಗಳು ಕಳೆದ 18 ವರ್ಷಗಳಿಂದ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದು, ಇದೀಗ ಮತ್ತೊಂದು ಆಂಬ್ಯುಲೆನ್ಸ್ ಖರೀದಿಸಿ ಸೇವೆಯನ್ನು ವಿಸ್ತರಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು. ಹಲವು ಸಂಘಗಳ ಉದ್ಘಾಟನೆ ಮಾಡಿದ್ದರೂ ಜನಮನ್ನಣೆ ಪಡೆದಿರುವುದು ಕೆಲವೇ ಸಂಘಗಳು ಮಾತ್ರ ಎಂದು ಅಭಿಪ್ರಾಯಪಟ್ಟರು.
ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀಹನುಮಂತನಾಥ ಸ್ವಾಮೀಜಿ ಮಾತನಾಡಿ, ಯಾವುದೇ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುವುದು ಸುಲಭವಲ್ಲ. ಕೊರೋನಾ ಹಾಗೂ ಬರಗಾಲದ ಸಂದರ್ಭದಲ್ಲಿ ಈ ಸಂಘಗಳು ಮುಂಚೂಣಿಯಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಹಾಗೂ ನಟ ಜಗ್ಗೇಶ್ ಅವರು ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿ ಮಾತನಾಡಿ, ಟೀಕೆ-ಟಿಪ್ಪಣಿಗಳಿಗಿಂತ ಸೇವಾ ಮನೋಭಾವವೇ ಶ್ರೇಷ್ಠ. ಅಡೆತಡೆಗಳ ನಡುವೆಯೂ ಸೇವೆ ಮಾಡುವವರು ಪರಮಾತ್ಮನಿಗೆ ಪ್ರಿಯರು ಎಂದು ಹೇಳಿದರು. ಪ್ರೆಂಡ್ಸ್ ಗ್ರೂಪ್ ಮತ್ತು ಜಗ್ಗೇಶ್ ಅಭಿಮಾನಿ ಬಳಗದ ಸೇವಾ ಕಾರ್ಯವನ್ನು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ನೂತನ ಉಚಿತ ಆಂಬ್ಯುಲೆನ್ಸ್ ಅನ್ನು ಶ್ರೀಮಠದ ಶ್ರೀಗಳು, ಜಗ್ಗೇಶ್ ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು. ಜೊತೆಗೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಉಮೇಶ್, ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಧರ್, ರೇಣುಕಾ ಆಸ್ಪತ್ರೆಯ ಡಾ. ಮಲ್ಲಿಕಾರ್ಜುನ್, ಪ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಜಗ್ಗೇಶ್ ಅಭಿಮಾನಿ ಬಳಗದ ಅಧ್ಯಕ್ಷ ಮಲ್ಲಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.