ಕೆ.ಆರ್.ಪೇಟೆ: ಪ್ರೊ.ಸುಜನಾ ಸಾಹಿತ್ಯ ಪ್ರತಿಷ್ಠಾನದಿಂದ ಚೊಚ್ಚಲ ಸುಜನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ- ಗುರುಗಳ ಹೆಸರು ಪ್ರಶಸ್ತಿ ಪಡೆದ ಶಿಷ್ಯ ಪ್ರೊ.ರಾ.ಗೌ
ಕೆ.ಆರ್.ಪೇಟೆ : ಕನ್ನಡ ಸಾರಸ್ವತ ಲೋಕದಲ್ಲಿ ಸಹೃದಯತೆ, ಅಂತಃಕರಣ ಮತ್ತು ಮಾನವೀಯ ಮೌಲ್ಯವುಳ್ಳ ಸಾಹಿತ್ಯ ಸೃಷ್ಟಿಸಿದ ಕನ್ನಡ ಸಾಹಿತ್ಯ ಲೋಕದ ಕೆಲವೇ ಪ್ರಮುಖ ಸಾಹಿತಿಗಳಲ್ಲಿ ಸಾಹಿತಿ ಪ್ರೊ. ಸುಜನಾ ಪ್ರಮುಖರು ಎಂದು ನಾಡಿನ ಸಾಹಿತಿ ಡಾ. ಹಂ.ಪ.ನಾಗರಾಜಯ್ಯ ಹೇಳಿದರು.
ಪ್ರೊ.ಸುಜನಾ ಹುಟ್ಟೂರು ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿರುವ ಎಸ್.ಎಲ್.ಎನ್. ಸಮುದಾಯ ಭವನದಲ್ಲಿ ಪ್ರೊ. ಸುಜನಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಸಮಾರಂಭದಲ್ಲಿ ಪ್ರದಾನ ಸಾಹಿತಿ ಪ್ರೊ. ರಾಮೇಗೌಡ(ರಾಗೌ ) ಅವರಿಗೆ ‘ಸುಜನಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಮೈಸೂರಿನಲ್ಲಿ ಹಾಸ್ಟೆಲ್ ದಿನಗಳಿಂದಲೂ ಸುಜನಾ ಮತ್ತು ನಾನು ಆತ್ಮೀಯ ಗೆಳೆಯರು. ಅಂತರ್ಮುಖಿ ವ್ಯಕ್ತಿತ್ವ, ಭಾವನಾ ಜೀವಿ, ಅಂದುಕೊಂಡಿದ್ದನ್ನು ಸಾಧಿಸಬೇಕೆಂಬ ಛಲ ಹೊಂದಿದ್ದರು. ಕಷ್ಟದಲ್ಲಿರುವವರಿಗೆ ನೆರವಾಗಬೇಕೆಂಬ ಮನೋಭಾವ ಉಳ್ಳವರಾಗಿದ್ದರು. ಸಮಾಜದ ಚಿಕಿತ್ಸಕ ಮನೋಭಾವದ ವಿಮರ್ಶಕರು. ಅವರಲ್ಲಿದ್ದ ಅಂತಃಕರಣವೇ ‘ ಯುಗಸಂಧ್ಯಾದಂಥ ಮೇರು ಮಹಾಕಾವ್ಯ ಬರೆಯಲು ಪ್ರೇರಣೆ ನೀಡಿರಬಹುದು ಎಂದರು. ಸುಜನಾ ಹೆಸರಿನಲ್ಲಿ ಪ್ರತಿಷ್ಠಾನದ ಚೊಚ್ಚಲ ಪ್ರಶಸ್ತಿಯು ಅವರ ಶಿಷ್ಯ ರಾಗೌ ಅವರಿಗೆ ಪ್ರದಾನ ಮಾಡುತ್ತಿರುವುದು ಶ್ರೇಷ್ಠ ಆಯ್ಕೆಯಾಗಿದೆ ಎಂದರು.

ಹೊಸಹೊಳಲು ಗ್ರಾಮದವರಾದ ಎಸ್.ನಾರಾಯಣಶೆಟ್ಟಿ ಅವರು ಸುಜನಾ ಕಾವ್ಯನಾಮದಿಂದ ಪ್ರಸಿದ್ದರಾದವರು. ಇವರು ರಚಿಸಿ ಯುಗಸಂಧ್ಯಾ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡಮೆ ಪ್ರಶಸ್ತಿ ಬಂದಿರುವುದು ಇವರ ಗಟ್ಟಿತನದ ಸಾಹಿತ್ಯ ಕೃಷಿಗೆ ಹಿಡಿದ ಕೈಗನ್ನಡಿಯಾಗಿದೆ. ಸುಜನಾ ಅವರು ಕುವೆಂಪು ಅವರ ಅತ್ಯಾಪ್ತ ಶಿಷ್ಯರಲ್ಲಿ ಒಬ್ಬರಾಗಿದ್ದರು. ಕುವೆಂಪು ಅವರು ಬದುಕಿರುವವರೆವಿಗೂ ಅವರ ಒಡನಾಟದಲ್ಲಿ ಇದ್ದು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ ಪುನತಿ ಅವರ ಒಡನಾಡಿಯಾಗಿಯೂ ಕೆಲಸ ಮಾಡಿ ಪುತಿನಾ ಅವರ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆಯುವ ಮೂಲಕ ಪುತಿನ ಹೆಸರನ್ನು ಹೆಚ್ಚು ಪ್ರಚುರಗೊಳಿಸುವಲ್ಲಿ ಸುಜನಾ ಅವರ ಪಾತ್ರ ಹಿರಿಯದಾಗಿತ್ತು. ಹೀಗೆ ಹಿರಿಯ ಸಾಹಿತಿಗಳ ಸೇವೆ ಸಲ್ಲಿಸಿದ ಪ್ರೊ. ಸುಜನಾ ಕನ್ನಡ ಸಾಹಿತ್ಯ ಲೋಕದ ಎಂದೂ ಮರೆಯಲಾಗದ ಮಾಣಿಕ್ಯ ಎಂದು ಡಾ.ಹಂಪನಾ ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಹಿರಿಯ ಸಾಹಿತಿ ಪ್ರೊ. ನನ್ನ ಗುರು ರಾಗೌ ಸುಜನಾ ಭಾವನಾ ಜೀವಿ ಪ್ರಕೃತಿಯೊಂದಿಗೆ ಲೀನರಾಗುವ ಗುಣವಳ್ಳವರು. ಬೌದ್ಧಿಕತೆಯನ್ನು ಕಟ್ಟುವ ಪ್ರಯತ್ನಕ್ಕೆ ಒತ್ತು ನೀಡಬೇಕು. ಕವಿಯ ಸಾಹಿತ್ಯದ ಬಗ್ಗೆ ವಿಚಾರಗೋಷ್ಠಿ, ಚಿಂತನ ಮಂಥನಗಳಾಗಬೇಕು ಎಂದರು.ನನ್ನ ಗುರುಗಳ ಹೆಸರಿನಲ್ಲಿ ಮೊದಲ ಪ್ರಶಸ್ತಿ ನನಗೆ ಸಿಕ್ಕಿರುವುದು ನನ್ನ ಪುಣ್ಯವಾಗಿದೆ ಎಂದರು. ಗುರು ಸುಜನಾ ಮತ್ತು ತಮ್ಮ ನಡುವಿನ ಅವಿನಾಭಾವ ಬಾಂದವ್ಯದ ಹಲವಾರು ಘಟನೆಗಳನ್ನು ಸ್ಮರಿಸಿಕೊಂಡರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಸುಜನಾ ಅವರಂತಹ ಸಾಹಿತಿಗಳ ಸಾಹಿತ್ಯ ಸೇವೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಉದ್ದೇಶದಿಂದ ಈ ಪ್ರಯತ್ನ. 6 ಲಕ್ಷ ವನ್ನು ದಾನಿಗಳಿಂದ ಸ್ವೀಕರಿಸಿ ಠೇವಣಿ ಇರಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಶಾಸಕ ಎಚ್.ಟಿ.ಮಂಜು ಸಮಾರಂಭದ ಅಧ್ಯಕ್ಷತೆ ವಹಿಸಿ ‘ಮರೆಯಲಾಗದ ಮಾತನಾಡಿದರು.
ಸುಜನತ್ವ’ ಕೃತಿಯನ್ನು ತುರುವೆಕೆರೆ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್ ಬಿಡುಗಡೆ ಮಾಡಿ ಮಾತನಾಡಿ, ಸುಜನಾ ಹೆಸರಿನಲ್ಲಿ ಭವನ ನಿರ್ಮಿಸಿದರೆ ಅನುದಾನವನ್ನು ಸಂಗ್ರಹಿಸಿಕೊಡಲಾಗುವುದು ಎಂದರು. ‘ಸುಜನತ್ವ’ ಕೃತಿ ಕುರಿತು ಪ್ರೊ.ಮೈಸೂರು ಕೃಷ್ಣ ಮೂರ್ತಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಭಿನಂದನಾ ನುಡಿಗಳನ್ನಾಡಿದರು.
ಪ್ರೊ.ಸುಜನಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಸ್. ಸೋಮಶೇಖರ್, ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಮುಖರಾದ ಪ್ರೊ.ಕೆ.ನರಸಿಂಹಮೂರ್ತಿ, ಪ್ರೊ: ಜಿಟಿ. ವೀರಪ್ಪ, ಸೋಮಶೇಖರಗೌಡ, ಸುಜನಾ ಸಹೋದರ ಡಾ.ಶ್ರೀನಿವಾಸ ಶೆಟ್ಟಿ, ಸಮಾಜ ಸೇವಕ ಆರ್.ಟಿ.ಒ ಮಲ್ಲಿಕಾರ್ಜುನ್, ಶಿ.ಕುಮಾರಸ್ವಾಮಿ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಕೆ.ಕಾಳೇಗೌಡ, ಬಲ್ಲೇನಹಳ್ಳಿ ಮಂಜುನಾಥ್, ಕತ್ತರಘಟ್ಟ ವಾಸು, ಪೂರ್ಣ ಚಂದ್ರತೇಜಸ್ವಿ, ಚಾ.ಶಿ. ಜಯಕುಮಾರ್, ಸುಕನ್ಯಾ, ರಂಗನಾಥ್, ಕೆ.ಜೆ. ನಾರಾಯಣ, ಮಂಜುನಾಥ್, ಕೆ.ಆರ್.ನೀಲಕಂಠ, ಪದ್ಮೇ ಶ್, ಶೀಳನೆರೆ ಶಿವಕುಮಾರ್, ಜಿ.ಎಸ್.ಮಂಜು, ಹೆಚ್.ಆರ್.ನಂದಕುಮಾರ್, ಅ.ಮಾ.ಶ್ಯಾಮೇಶ್, ಮಾರೇನಹಳ್ಳಿ ಲೋಕೇಶ್, ರಂಗಸ್ವಾಮಿ, ಸುಜನಾ ಕುಟುಂಬದ ಸದಸ್ಯರು, ನೂರಾರು ಗಣ್ಯರು, ಹಾಗೂ ಅಭಿಮಾನಿಗಳು ಮತ್ತು ಹೊಸಹೊಳಲು ಗ್ರಾಮಸ್ಥರು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
