ಕೆ.ಆರ್.ಪೇಟೆ: ಕೃಷ್ಣರಾಜಪೇಟೆ ಪಟ್ಟಣದ ಜಯನಗರ ಬಡಾವಣೆ ನಿವಾಸಿಗಳ ನ್ಯಾಯ ಬದ್ಧವಾದ ಹೋರಾಟಕ್ಕೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತವು ಬೆಂಬಲ ನೀಡಿ ನ್ಯಾಯ ದೊರಕಿಸಿ ಕೊಡುವ ಕೆಲಸವನ್ನು ಮಾಡಬೇಕು ಎಂದು ಜಯನಗರ ಬಡಾವಣೆ ನಿವಾಸಿಗಳು ಇಂದು ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರವನ್ನು ಅರ್ಪಿಸಿದರು.
ಹೊಸ ಹೊಳಲು ಗ್ರಾಮದ ಸರ್ವೆ ನಂಬರ್ 141 ರಲ್ಲಿ ಒಂದು ಎಕರೆ 31 ಗುಂಟೆ , ಕುಳುವಾಡಿ ಇನಾಂ ಭೂಮಿಯನ್ನು 1967 68ನೇ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿಯ ಜನರಿಗೆ ನಿವೇಶನಗಳನ್ನು ಕೊಡುವ ಉದ್ದೇಶದಿಂದ ಅಂದಿನ ತಾಲೂಕು ಅಭಿವೃದ್ಧಿ ಮಂಡಳಿಯವರು ಮಂಡ್ಯ ಜಿಲ್ಲಾ ವಿಶೇಷ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಭೂಸ್ವಾಧೀನದ ಪ್ರಸ್ತಾವನೆಯನ್ನು ಸಲ್ಲಿಸಿ 1977ರಲ್ಲಿ ಅವಾರ್ಡ್ ಮಾಡಿ ಓಎಂ ಭೂ ಸ್ವಾಧೀನ ಆದೇಶ ಹೊರಡಿಸಿ ಮೇಲಿನ ಜಮೀನನ್ನು ಸರ್ಕಾರವು ಸ್ವಾಧೀನಕ್ಕೆ ತೆಗೆದುಕೊಂಡು ಕುಳುವಾಡಿ ವಂಶಸ್ಥರಿಗೆ ಸರ್ಕಾರವು ಅಂದಿನ ದರದಲ್ಲಿ ಪರಿಹಾರದ ಹಣವನ್ನು ಮೈಸೂರು ಬ್ಯಾಂಕಿನಲ್ಲಿ ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಹೆಸರಿನಲ್ಲಿ ಜಂಟಿ ಖಾತೆಯಲ್ಲಿ ಜಮಾ ಮಾಡಿರುತ್ತಾರೆ ಅಲ್ಲದೇ ಸರ್ವೇ ನಂಬರ್ 141ರ ಪೈಕಿ 9 ಜನ ಕುಳುವಾಡಿ ವಂಶಸ್ಥರಿಗೂ ತಲಾ ಒಂದೊಂದು ನಿವೇಶನವನ್ನು ಉಚಿತವಾಗಿ ಕೊಟ್ಟು, ಉಳಿಕೆ ನಿವೇಶನಗಳನ್ನು ಸರ್ಕಾರದ ನಿಯಮಾನುಸಾರ ನಿವೇಶನ ರಹಿತ ಪರಿಶಿಷ್ಟ ಜಾತಿಯವರಿಗೆ ವಿತರಣೆ ಮಾಡಿ ಹಕ್ಕುಪತ್ರದ ಮೂಲಕ ವಿತರಣೆ ಮಾಡಿರುತ್ತಾರೆ.
ಎಲ್ಲಾ ಕಡತಗಳನ್ನು ಪುರಸಭಾ ಕಚೇರಿಗೆ ವರ್ಗಾಯಿಸಿ ಈ ದಾಖಲೆಗಳ ಆಧಾರದ ಮೇಲೆ ಕೆಲವು ನಿವೇಶನದಾರರು ಅವರ ಅನುಕೂಲಕ್ಕೆ ತಕ್ಕಂತೆ ನಿವೇಶನಗಳನ್ನು ಮಾರಾಟ ಮಾಡಿರುತ್ತಾರೆ . ಕ್ರಯಕ್ಕೆ ಪಡೆದ ಕೆಲವರು ಮನೆ ಕಟ್ಟಿಕೊಳ್ಳುವ ಉದ್ದೇಶದಿಂದ ನಿವೇಶನಗಳಿಗೆ ಖಾತೆ ಈ ಸ್ವತ್ತು ಮಾಡಿಕೊಳ್ಳಲು ಕಂದಾಯ ಹಣ ಕಟ್ಟಿ ಪುರಸಭೆಯಿಂದ ಲೈಸನ್ಸ್ ಪಡೆದುಕೊಂಡು ಸುಮಾರು 26 ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸವಾಗಿರುತ್ತಾರೆ . ಉಳಿಕೆ 14 ನಿವೇಶನಗಳನ್ನು ಕ್ರಯಕ್ಕೆ ಪಡೆದವರು ತಮ್ಮ ಹೆಸರಿಗೆ ನಿವೇಶನಗಳನ್ನು ಖಾತೆ ಮಾಡಿಕೊಂಡು ಸ್ವಾಧೀನದಲ್ಲಿ ಇರುತ್ತಾರೆ ಈ ಮಧ್ಯೆ ಕುಳುವಾಡಿಕೆ ವಂಶಸ್ಥರು ಮನೆ ಕಟ್ಟುವವರಿಗೆ ಅಡಚಣೆ ಮಾಡಿದ್ದರಿಂದ ನಿವೇಶನದಾರರ ಕೆ.ಆರ್.ಪೇಟೆಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ದಾವೆ ಹೂಡಿ ದಾವೆಯು ವಾದಿಯ ಪರವಾಗಿ ಡಿಕ್ರಿ ಆಗಿರುತ್ತದೆ ಸರ್ಕಾರದ ಪ್ರತಿಯೊಂದು ಆದೇಶಗಳು ಬಡಾವಣೆಯ ನಿವಾಸಿಗಳ ಪರವಾಗಿ ಇದ್ದರೂ ನಿವಾಸಿಗಳಿಗೆ ಅಶಾಂತಿ ಉಂಟು ಮಾಡುತ್ತಿರುವ ಕುಳುವಾಡಿಕೆ ವಂಶಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಕರ್ನಾಟಕ ಎಸ್ಸಿ-ಎಸ್ಟಿ ಆಯೋಗಕ್ಕೆ 26 ಮನೆ ಹಾಗೂ 14 ನಿವೇಶನಗಳು ಕಾನೂನು ರೀತಿ ಖಾತೆ, ಈ ಸ್ವತ್ತು ಸ್ವಾಧೀನ ದಾಖಲೆಗಳು ಇದ್ದರೂ ಸಹ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿರುವ ಪುರಸಭೆ ಮುಖ್ಯಾಧಿಕಾರಿ ಅಶೋಕ್ ಮತ್ತು ತಾಲೂಕು ಸರ್ವೆಯರ್ ಆನಂದ್ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು. ಸದರಿ ಪ್ರಕರಣವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಜಯನಗರ ಬಡಾವಣೆ ನಿವಾಸಿಗಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ರಕ್ಷಣೆ ಒದಗಿಸಬೇಕು,
ನಿವೇಶನಗಳ ಫಲಾನುಭವಿಗಳು ಲೈಸೆನ್ಸ್ ಪಡೆದು ಮನೆ ಕಟ್ಟಲು ಹೋದಾಗ ಕುಳುವಾಡಿ ವಂಶಸ್ಥರು ನಮ್ಮ ಹೆಸರಿನಲ್ಲಿ ಆರ್ ಟಿ ಸಿ ಇದೆ ಎಂದು ತಂಟೆ ತಕರಾರು ಮಾಡಿದ್ದರಿಂದ. ವಾದಿಗಳಾದ ಕನ್ಯಾಕುಮಾರಿ ಅವರು ಕೆ.ಆರ್.ಪೇಟೆ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೇ ನಡೆಸಿ ಕೇಸು ವಾದಿಗಳಾದ ಕನ್ಯಾಕುಮಾರಿ ಪರವಾಗಿ ನ್ಯಾಯಾಲಯದಲ್ಲಿ ಡಿಕ್ರಿ ಯಾಗಿರುತ್ತದೆ. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೇಯೂ ಕುಲಂಕುಶವಾಗಿ ವಿಚಾರಣೆ ನಡೆದು ಮೇಲಿನ ಜಮೀನು ಸರ್ಕಾರ ಸ್ವಾಧೀನಕ್ಕೆ ಪಡೆದು ಅನ್ಯ ಕ್ರಾಂತ ಹಾಗೂ ಸ್ವಾಧೀನದ ಆದೇಶದ ಅವಾರ್ಡ್ ಮಾಡಿರುವುದು ಕಾನೂನು ರೀತಿಯ ಸರಿಯಾಗಿದೆ ಎಂದು ಮೇಲ್ಮನವಿದಾರರಾದ ಕುಳುವಾಡಿಕೆ ವಂಶಸ್ಥರ ಅರ್ಜಿಯನ್ನು ಮಾನ್ಯ ಉಚ್ಚ ನ್ಯಾಯಾಲಯವು ವಜಾ ಮಾಡಿರುತ್ತದೆ ಆದ್ದರಿಂದ ಜಯನಗರ ಬಡಾವಣೆಯ ನಿವಾಸಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಡಾ. ಅಶೋಕ್ ಅವರಿಗೆ ಬಡಾವಣೆಯ ನಿವಾಸಿಗಳು ದಲಿತ ನಾಯಕ ಬಸ್ತಿ ರಂಗಪ್ಪ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಮುದುಗೆರೆ ರಾಜೇಗೌಡ, ದಲಿತ ಮುಖಂಡ ಬಸ್ತಿರಂಗಪ್ಪ, ಟಿಎಪಿಸಿಎಂಎಸ್ ಚೆಲುವಯ್ಯ, ಅಂಚನಹಳ್ಳಿ ಸುಬ್ಬಣ್ಣ, ಬಂಡಿಹೊಳೆ ರಮೇಶ್, ಚಂದ್ರಕಲಾ ಕೃಷ್ಣಮೂರ್ತಿ ಪ್ರೇಮಮ್ಮ ಸೋಮಣ್ಣ, ಹೊಸಹೊಳಲು ಟೈಲರ್ ಕೃಷ್ಣ ಸೇರಿದಂತೆ ನೂರಾರು ಜನರು ಜಯನಗರ ಬಡಾವಣೆ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
