ಮಧುಗಿರಿ:- ತಾಲೂಕಿನ ಸೋಂಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಎಳುಮಂಧಮ್ಮ ದೇವಿ ದೇವಸ್ಥಾನದಲ್ಲಿ ಕುಲದೇವತೆಗಳ ಪುನರ್ ಪ್ರತಿಷ್ಠಾಪನೆ, ಕಳಸ ಪ್ರತಿಷ್ಠಾಪನೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಧರ್ಮದೇವತೆಯನ್ನು 9 ಮಂದಿ ಬುಡಕಟ್ಟು ಅಣ್ಣಾ-ತಮ್ಮಂದಿರು ಹಾಗೂ ಹಾಲುಮತ ಬುಡಕಟ್ಟು ಸಮುದಾಯದವರು ತಲೆತಲಾಂತರಗಳಿಂದ ಆರಾಧಿಸಿಕೊಂಡು ಬರುತ್ತಿದ್ದಾರೆ. ಇದೇ ಪರಂಪರೆಯನ್ನು ಮುಂದುವರಿಸಿಕೊಂಡು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡ ಹಿನ್ನೆಲೆ ಭವ್ಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕಳಸ ಪ್ರತಿಷ್ಠಾಪನೆ, ವಿಶೇಷ ಹೋಮ-ಹವನ, ದೇವಿ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆದವು. 9 ಮಂದಿ ಬುಡಕಟ್ಟು ಅಣ್ಣಾ-ತಮ್ಮಂದಿರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕುಟುಂಬ ಸಮೃದ್ಧಿ, ಗ್ರಾಮಾಭಿವೃದ್ಧಿ ಹಾಗೂ ಜನರ ಕ್ಷೇಮಕ್ಕಾಗಿ ಪ್ರಾರ್ಥಿಸಿದರು.

ಎಳುಮಂಧಮ್ಮ ದೇವಿ ಹರಕೆ ಹೊತ್ತ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ದೇವತೆ ಎಂಬ ನಂಬಿಕೆ ಭಕ್ತರಲ್ಲಿ ಬಲವಾಗಿದ್ದು, ತುಮಕೂರು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ದೇವಾಲಯದಲ್ಲಿ ಕಳೆದ 49 ದಿನಗಳಿಂದ ಮಂಡಲ ಪೂಜೆಗಳು ನಡೆಯುತ್ತಿದ್ದು, ಸಾವಿರಾರು ಭಕ್ತರು ಭಾಗವಹಿಸಿ ಸೇವೆ ಸಲ್ಲಿಸಿದ್ದರು. ಪುನರ್ ಪ್ರತಿಷ್ಠಾಪನಾ ಮಹೋತ್ಸವದ ದಿನ ದೇವಾಲಯ ಆವರಣದಲ್ಲಿ ಭಕ್ತರ ಸಂಭ್ರಮ ಮನೆಮಾಡಿತ್ತು.

ಗ್ರಾಮಸ್ಥರು, ದೇವಾಲಯ ಸಮಿತಿ ಸದಸ್ಯರು ಹಾಗೂ ಭಕ್ತರು ಮಾತನಾಡಿ, “ಈ ದೇವತೆ ನಮ್ಮ ಕುಟುಂಬಗಳ ಆರಾಧ್ಯ ಶಕ್ತಿ. ತಲೆತಲಾಂತರಗಳಿಂದ ಪೂಜಿಸಿಕೊಂಡು ಬಂದಿರುವ ನಮ್ಮ ಧರ್ಮದೇವತೆಯ ಪುನರ್ ಪ್ರತಿಷ್ಠಾಪನೆ ನಮ್ಮೆಲ್ಲರಿಗೂ ಪುಣ್ಯದ ಕ್ಷಣ” ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಮುಖಂಡರು, ಭಕ್ತರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಕೊರಟಗೆರೆ.
