ಹಾಸನ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಮೇಲಿನ ಕೆಲಸದ ಒತ್ತಡ, ಬಾಕಿ ವೇತನ ಬಿಡುಗಡೆ ವಿಳಂಬ ಸೇರಿದಂತೆ ಪಿಡಿಒಗಳ ಸೇವಾ ರಕ್ಷಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಜಿಲ್ಲಾಧ್ಯಕ್ಷ ಗಿರೀಶ್, ಇತ್ತೀಚೆಗೆ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಪಿಡಿಒ ಮುಕ್ತಮಹುಸೇನ ಕರಡಿಗುಡ್ಡ ಎಂಬುವವರು ಅತಿಯಾದ ಕೆಲಸದ ಒತ್ತಡದ ಜೊತೆಗೆ ಲೋಕಾಯುಕ್ತ ತನಿಖೆ ಹಾಗೂ ವೇತನವಿಲ್ಲದೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು. ದಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಅಮಾನತುಗೊಂಡು ಸುಮಾರು ೮ ತಿಂಗಳುಗಳ ಕಾಲ ವೇತನವಿಲ್ಲದೆ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದರು. ಅಲ್ಲದೆ ಗದಗದ ಅಸೂಟಿ ಹಾಗೂ ಕೊತಬಾಲ ಎಂಬ ಎರಡು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುವ ವೇಳೆ ಅತಿಯಾದ ಕೆಲಸದ ಒತ್ತಡದಿಂದ ಬೇಸತ್ತು ಆತ್ಮಹತ್ಯೆಗ ಶರಣಾದರು ಎಂದರು.
ಈ ರೀತಿಯ ಘಟನೆ ಗ್ರಾಮೀಣಾಭಿವೃದ್ಧಿಯ ಆಧಾರ ಸ್ತಂಬವಾಗಿರುವ ಪಿಡಿಒಗಳು ತೀವ್ರವಾದ ಕೆಲಸದ ಒತ್ತಡದಿಂದ ನಲುಗುತ್ತಿದ್ದಾರೆ. ನಿರಂತರ ಒತ್ತಡ ಹಾಗೂ ಅಕಾಲಿಕ ಸಾವಿನ ಕುರಿತು ಅಧ್ಯಯನ ಮಾಡಲು ಕಳೆದ ಒಂದು ವರ್ಷದ ಹಿಂದೆಯೇ ಮೀನಾಕ್ಷಿ ಸುಂದರಂ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ಈ ವರೆಗೂ ಸರ್ಕಾರಕ್ಕೆ ವರದಿ ಸಲ್ಲಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆದ್ದರಿಂದ ಆತ್ಮಹತ್ಯೆಗೆ ಶರಣಾದ ಪಿಡಿಒ ಮುಕ್ತಮಹುಸೇನ ಕರಡಿಗುಡ್ಡ ಅವರ ಆತ್ಮಹತ್ಯೆಗೆ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸಿ ಅವರ ಕುಟುಂಬಕ್ಕೆ ಬಾಕಿ ವೇತನ, ಆರ್ಥಿಕ ಸೌಲಭ್ಯ ತಕ್ಷಣ ಒದಗಿಸಿ ಕುಟುಂಬದ ಓರ್ವ ಸದಸ್ಯರಿಗೆ ಅನುಕಂಪದ ಆದಾರದ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದರು.
ಆಯುಕ್ತಾಲಯ, ಜಿ.ಪಂ. ತಾ.ಪಂ ಕಚೇರಿಗಳಲ್ಲಿನ ಸಿಬ್ಬಂದಿಗೆ ಕಡ್ಡಾಯ ವರ್ಗಾವಣೆ ಜಾರಿಗೊಳಿಸಬೇಕು. ಹೆಚ್ಚುವರಿ ಹೊರೆ ತಪ್ಪಿಸಿ ಒತ್ತಡ ರಹಿತ ಕೆಲಸ ಮಾಡುವ ವಾತಾವರಣ ಸೃಷ್ಟಿಸಬೇಕು. ಕ್ಷುಲ್ಲಕ ಕಾರಣಕ್ಕೆ ಅಮಾನತು ತಪ್ಪಿಸುವುದರ ಜೊತೆಗೆ ಯಾವುದೇ ವಿಚಾರಣೆಗೆ ಒಳಗಾದರೆ ನಿರ್ದಿಷ್ಟ ಕಾಲಮಿತಿಯೊಳಗೆ ತನಖೆ ನಡೆಸಿ ಅಮಾನತು ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸುರೇಶ್, ಖಜಾಂಚಿ ಹರೀಶ್, ಸದಸ್ಯರು ಸೇರಿದಂತೆ ಜಿಲ್ಲೆಯ ಎಲ್ಲಾ ಪಿಡಿಒಗಳು ಇದ್ದರು.
