ಕೊರಟಗೆರೆ:– ಇವತ್ತೀನ ಯುವ ಪೀಳಿಗೆ ಮಾನಸಿಕ ಹಾಗೂ ದೈಹಿಕ ಸದೃಡವಾಗಿರಬೇಕಾದರೆ ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಿದಾಗ ಮಾತ್ರ ಯಾವುದೇ ದುಷ್ಚಟಗಳಿಂದ ದೂರ ಇರಲು ಸಾದ್ಯ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಡಾ.ಜಿ.ಪರಮೇಶ್ವರ್ ಯುವ ಪಡೆಯಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಬಡ್ಡಿ ಜಾತ್ರೆಯ ಪರಮೇಶ್ವರ್ ಕಪ್ ಪಂದ್ಯವಳಿಗಳನ್ನು ವೀಕ್ಷಿಸಿ ಮಾತನಾಡಿದರು.
ರಾಜ್ಯದಲ್ಲಿ ತುಮಕೂರು ಬೆಂಗಳೂರಂತೆ ವೇಗವಾಗಿ ಬೆಳೆಯುತ್ತಿದ್ದು ಅದರಂತೆ ನಮ್ಮ ತುಮಕೂರಿನಲ್ಲಿ ಎಲ್ಲಾ ರೀತಿಯ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಪ್ರಸ್ತುತ ತುಮಕೂರಿನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಟೆನಿಸ್ ಪಂದ್ಯ ಆಡುವುದಕ್ಕೆ ಈಗಾಗಲೇ ಸುಮಾರು 30 ದೇಶಗಳಿಂದ 100 ಕ್ಕೂ ಹೆಚ್ಚು ಮಹಿಳಾ ಟೆನಿಸ್ ಆಟಗಾರ್ತಿಯರು ಆಗಮಿಸಿದ್ದಾರೆ ಎಂದು ತಿಳಿಸಿದರು.
ಮೇ.3 ರಿಂದ ಪ್ರಾರಂಭವಾಗುವ ಕ್ರೀಡಾಕೂಟ ಮೇ. 10ರ ವರಗೆ ಪಂದ್ಯಗಳು ನಡೆಯಲಿದ್ದು, ತುಮಕೂರು ಜಿಲ್ಲೆಯ ಕ್ರೀಡಾಭಿಮಾನಿಗಳು ಎಲ್ಲರು ವೀಕ್ಷಿಸುವ ಮೂಲಕ ತಮ್ಮ ಮಕ್ಕಳಲ್ಲಿ ಕ್ರೀಡೆಗೆ ಹೆಚ್ಚು ಆಸಕ್ತಿ ಬೆಳಸಿಕೊಳ್ಳವಂತೆ ಮಾಡಬೇಕಿದೆ. ಕಳೆದ ವಾರದ ಹಿಂದೆ ಅಂತರಾಷ್ಟೀಯ ಮಟ್ಟದ ಕ್ರೀಡಾಪಟುಗಳ ಅಯ್ಕೆಯೂ ಸಹ ತುಮಕೂರಿನಲ್ಲಿ ನಡೆದಿದೆ. ಅದೇ ರೀತಿ ಕೊರಟಗೆರೆಯಲ್ಲಿ ರಾಷ್ಟೀಯ, ರಾಜ್ಯ ಮಟ್ಟದ ಕಬ್ಬಡ್ಡಿಗಳನ್ನು, ರಾಜ್ಯ ಮಟ್ಟದ ಕ್ರಿಕೆಟ್, ವಾಲಿಬಾಲ್ ಪಂದ್ಯವಳಿಗಳನ್ನು ನಮ್ಮ ಯುವ ಪಡೆಯ ಯುವಕರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.

ಕೊರಟಗೆರೆಯಲ್ಲಿ ಈಗಾಗಲೇ 6.5 ಕೋಟಿಗಳ ವೆಚ್ಚದಲ್ಲಿ ಒಳ ಕ್ರೀಡಾಂಗಣ ನಿರ್ಮಿಸಲಾಗಿದೆ, 3.5 ಕೋಟಿ ರೂಗಳ ವೆಚ್ಚದಲ್ಲಿ ಹೊರ ಕ್ರೀಡಾಂಗಣವನ್ನು ಅಭಿವೃದ್ದಿ ಪಡಿಸಲು ಹಣ ಬಿಡುಗಡೆ ಮಾಡಲಾಗಿದೆ. ಈಗಿನ ಯುವಕರು ವ್ಯಸನಗಳಿಗೆ ಬಲಿಯಾಗಿ ಜೀವನನ್ನು ಹಾಳು ಮಾಡಿಕೊಳ್ಳದೆ ಕ್ರೀಡೆಗಳಲ್ಲಿ ಭಾಗವಹಿಸಿ ಸದೃಡರಾಗಬೇಕಿದೆ. ಇದರಿಂದ ಉತ್ತಮ ಸಮಾಜ ಬಲಿಷ್ಟ ಭಾರತ ನಿರ್ಮಾಣವಾಗಲಿದೆ, ಈ ಕಬ್ಬಡ್ಡಿ ಪಂದ್ಯವಳಿಗಳಲ್ಲಿ ಭಾಗವಹಿಸಿರುವ ಆಟಗಾರರು ಮತ್ತು ಆಟಗಾರ್ತಿಯರಿಗೆ ಶುಭಕೋರಿದ ಅವರು ತೀರ್ಪುಗಾರರು ನಿಪಕ್ಷಪಾತವಾಗಿ ತೀರ್ಪು ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ಎಸ್ಪಿ ಅಶೋಕ್, ತಹಶೀಲ್ದಾರ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವಥನಾರಾಯಣ, ಅರಕೆರೆಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರಾದ ಎ.ಡಿ.ಬಲರಾಮಯ್ಯ, ಮಹಾಲಿಂಗಪ್ಪ, ವೆಂಕಟೇಶ್, ಎಲ್.ರಾಜಣ್ಣ, ಓಬಳರಾಜು, ಮುನ್ನಬಾಯ್, ಭೀಮರಾಜು, ಪ್ರಭಾಕರ್, ಮಹೇಶ್, ಯುವಪಡೆಯ ವಿನಯ್ಕುಮಾರ್, ಅರವಿಂದ್, ಅಮರ್, ದೀಪಕ್, ಸೂಫಿಯಾನ್, ಗೋಪಿನಾಥ್, ಗಣೇಶ್, ರಾಖಿ, ದರ್ಶನ್, ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್ ಕೊರಟಗೆರೆ.
