ಕೆ.ಆರ್.ಪೇಟೆ: ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ರೇಷ್ಮೆ ತರಬೇತಿ ಕೇಂದ್ರದಲ್ಲಿ ಶಾಸಕ ಹೆಚ್.ಟಿ.ಮಂಜು ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ (ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ತಾಲ್ಲೂಕಿನಾದ್ಯಂತ ಅಕ್ರಮವಾಗಿ ಮಧ್ಯ ಮಾರಾಟ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಅಬಕಾರಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಮೂಡನಹಳ್ಳಿ ಹಾಗೂ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟದಿಂದ ಗ್ರಾಮದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ ಈ ಬಗ್ಗೆ ಆ ಗ್ರಾಮಗಳು ಮಹಿಳೆಯರು ನಮ್ಮ ಬಳಿ ಬಂದು ದೂರು ಹೇಳುತ್ತಿದ್ದಾರೆ. ಅಬಕಾರಿ ಅಧಿಕಾರಿಗಳು ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಂಡು ಗ್ರಾಮಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಶಾಸಕ ಮಂಜು ಅವರು ಅಬಕಾರಿ ಅಧಿಕಾರಿಗೆ ಸೂಚನೆ ನೀಡಿದರು.
ತಾಲ್ಲೂಕಿನ ಮಾಕವಳ್ಳಿ ಬಳಿ ಇರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯಿಂದ ಪರಿಸಕ್ಕೆ ದಕ್ಕೆ ತರುವ ವಿಷಕಾರದ ಬೂದಿ, ರಾಸಾಯನಿಕಯುಕ್ತ ತ್ಯಾಜ್ಯ ನೀರು ಕಾರ್ಖಾನೆಯಿಂದ ಹೊರ ಬರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ ಈ ಬಗ್ಗೆ ಖುದ್ದು ಪರಿಶೀಲನೆ ಮಾಡಿ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಕೇವಲ ಕಾರ್ಖಾನೆಯು ನೀಡಿದ ದಾಖಲೆಗಳ ಆಧಾರದ ಮೇಲೆ ಮಾಹಿತಿ ನೀಡಬಾರದು. ಕಾರ್ಖಾನೆಯ ತ್ಯಾಜ್ಯ ನೀರು ಪವಿತ್ರ ಹೇಮಾವತಿ ನದಿಗೆ ಸೇರದಂತೆ ಕಠಿಣ ಕ್ರಮ ವಹಿಸಬೇಕು ಎಂದು ಶಾಸಕರು ಜಿಲ್ಲಾ ಪರಿಸರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಾಗಮಂಗಲ ಆರ್.ಟಿ.ಓ ಕಚೇರಿಯಲ್ಲಿ ಮಧ್ಯವರ್ತಿಗಳ ಮೂಲಕ ಹೋದರೆ ದುಬ್ಬಟ್ಟು ಲಂಚ ಪಡೆದು ಎಲ್ಲಾ ಕೆಲಸಗಳನ್ನು ಅಲ್ಲಿನ ಅಧಿಕಾರಿಗಳು ಮಾಡಿಕೊಡುತ್ತಿದ್ದಾರೆ. ಆದರೆ ನೇರವಾಗಿ ಗ್ರಾಹಕರು ನೇರವಾಗಿ ಹೋದರೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಹೆರಗನಹಳ್ಳಿ ಪ್ರಶಾಂತ್ ಅವರು ದೂರು ನೀಡಿರುವುದನ್ನು ಸಭೆಯಲ್ಲಿ ಉಲ್ಲೇಖಿಸಿ ಮಾತನಾಡಿದ ಶಾಸಕರು ಸಭೆಯಲ್ಲಿ ಹಾಜರಿದ್ದ ನಾಗಮಂಗಲ ಆರ್.ಟಿ.ಓ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಕೂಡಲೇ ಹೊರರಾಜ್ಯಗಳ ವಾಹನಗಳಿಗೆ ಎಫ್.ಸಿ ನೀಡುವ ವಿಚಾರದಲ್ಲಿ ನೇರವಾಗಿ ತಮ್ಮ ಕಚೇರಿಗೆ ಬರುವ ಸಾರ್ವಜನಿಕರಿಗೆ ಮಾಡಿಕೊಡುವ ಮೂಲಕ ಮುಂದಿನ ದಿನಗಳಲ್ಲಿ ಈ ರೀತಿಯ ದೂರುಗಳು ಬಾರದಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ರೈತರು ಸ್ವಾಧೀನದಲ್ಲಿರುವ ಭೂಮಿಯನ್ನು ಅರಣ್ಯ ಇಲಾಖೆಯವರು ನಮ್ಮದು ಭೂಮಿ ಎಂದು ದಬ್ಬಾಳಿಕೆ ಮಾಡಿ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ನಾನು ಸಹಿಸುವುದಿಲ್ಲ. ರೈತರು ತಮ್ಮ ಬದುಕಿಗಾಗಿ ಅರಣ್ಯದ ಬಳಿ ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುತ್ತಾರೆ ಆದರೆ ಅರಣ್ಯ ಇಲಾಖೆಯವರು ಜಂಟಿ ಸರ್ವೆ ಮಾಡಿಸದೇ ಸದರಿ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸಿದರೆ ನಾನೇ ರೈತರೊಡಗೂಡಿ ಅರಣ್ಯ ಇಲಾಖೆಯ ವಿರುದ್ದ ಹೋರಾಟ ನಡೆಸಬೇಕಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಲ್ಲದೆ ಕೆರೆ ಕಟ್ಟೆಗಳ ಹೂಳು ತೆಗೆದು ಅಭಿವೃದ್ಧಿ ಮಾಡುವ ರೈತರಿಗೆ ಇದು ಅರಣ್ಯ ಇಲಾಖೆಯ ಭೂಮಿ ಎಂದು ತಡೆ ಮಾಡುವುದು ಸರಿಯಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಜೆಜೆಎಂ ಕೆಲಸ ಪೂರ್ಣಗೊಳ್ಳದೇ ಇದ್ದರೂ ಸಹ ಗ್ರಾಮ ಪಂಚಾಯಿಗಳು ಕೆಲಸ ಪೂರ್ಣಗೊಂಡಿದೆ ಎಂದು ಛಾರ್ಜ್ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಈ ರೀತಿ ಮಾಡಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟು ಸಾರ್ವಜನಿಕರ ಕೆಲಸ ಅರ್ಧಕ್ಕೆ ನಿಂತು ತೊಂದರೆಯಾದರೆ ಸಂಬಂಧಪಟ್ಟ ಪಿಡಿಓ ಹಾಗೂ ಜಿ.ಪಂ.ಕುಡಿಯುವ ನೀರು ವಿಭಾಗದ ಇಂಜಿನಿಯರ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕಾನೂನು ಕ್ರಮಕ್ಕೆ ಮೇಲಧಿಕಾರಿಗಳಿಗೆ ಪತ್ರ ಬರೆಯಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.

ಬಣ್ಣೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ರೈತರಿಗೆ ಜಮೀನು ಸಾಗುವಳಿ ಚೀಟಿ ಮೂಲಕ ರೈತರಿಗೆ ಸೇರಿದ್ದರೂ ಸಹ ಅಧಿಕಾರಿಗಳಿಗೆ ರೈತರಿಗೆ ಪರಿಹಾರ ಕೊಡಿಸದೇ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಗುತ್ತಿಗೆ ಪಡೆದುಕೊಂಡಿರುವ ಫೇವರೀಚ್ ಮೆಘಾ ಫುಡ್ಪಾರ್ಕ್ ಮಾಲೀಕನಿಗೆ ಅನುಕೂಲ ಮಾಡಿಕೊಡುತ್ತಿರುವ ಕಾರಣ ಹಲವಾರು ರೈತರಿಗೆ ಅನ್ಯಾಯವಾಗಿದೆ. ಇತ್ತ ಭೂಮಿಯೂ ಇಲ್ಲ, ಅತ್ತ ಪರಿಹಾರವೂ ಇಲ್ಲದಂತಾಗಿದೆ ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ತುರ್ತು ಗಮನ ಹರಿಸಿ ಸಾಗುವಳಿ ಚೀಟಿ, ಆರ್.ಟಿ.ಸಿ ಇತರೆ ದಾಖಲೆಗಳು ಇರುವ ರೈತರಿಗೆ ಪರಿಹಾರ ಪಡೆದುಕೊಳ್ಳಲು ಅಗತ್ಯ ಸಹಕಾರ ನೀಡಬೇಕು ಎಂದು ಶಾಸಕರು ತಾಕೀತು ಮಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುವ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಆದರೆ ಮನ್ಮುಲ್ ನಿರ್ದೇಶಕರ ತಾಳಕ್ಕೆ ತಕ್ಕಂತೆ ಕುಣಿಯುವ ಕೆಲಸ ಮಾಡುತ್ತಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು ಸರ್ಕಾರದಿಂದ ಹಾಗೂ ಒಕ್ಕೂಟದಿಂದ ಸುಗುವ ಸೌಲಭ್ಯಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಮನ್ಮುಲ್ ನಿರ್ದೇಶಕ ಹೇಳಿದಂತೆ ಕಾನೂನು ಮೀರಿ ಕೆಲಸ ಮಾಡಿದರೆ ನಿಮ್ಮ ಮೇಲಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಸಭೆಯಲ್ಲಿ ಹಾಜರಿದ್ದ ಮನ್ಮುಲ್ ಮಾರ್ಗದ ವಿಸ್ತರಣಾಧಿಕಾರಿ ಶಶಿಕುಮಾರ್ ಅವರಿಗೆ ಎಚ್ಚರಿಕೆ ನೀಡಿದರು.
ಹೀಗೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಸರಿಯಾಗಿ ಕೆಲಸ ಮಾಡದ ಹಲವು ಇಲಾಖೆಗಳ ಅಧಿಕಾರಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಮುಂದಿನ ಸಭೆಯೊಳಗೆ ಶೇ.100ರಷ್ಟು ಪ್ರಗತಿ ಸಾಧಿಸಿ ವರದಿ ತರಬೇಕು. ಕೆಲವು ಅಧಿಕಾರಿಗಳು ತಮ್ಮ ಕಚೇರಿಯ ಕಿರಿಯ ಅಧಿಕಾರಿಗಳನ್ನು ಸಭೆಗೆ ಕಳಿಸಿ ತಾವು ಗೈರು ಹಾಜರಾಗಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಶಾಸಕರು ಅಂತಹ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡುವಂತೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ ಅವರಿಗೆ ಸಲಹೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾ.ಪಂ.ಆಡಳಿತಾಧಿಕಾರಿ ಮೀನುಗಾರಿಕೆ ಜಿಲ್ಲಾ ನಿರ್ದೇಶಕ ಬಾಬಾಸಾಬ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್, ತಾಲ್ಲೂಕು ಪಂಚಾಯತ್ ಇಓ ಕೆ.ಸುಷ್ಮಾ, ತಾಲ್ಲೂಕು ಯೋಜನಾಧಿಕಾರಿ ಎಂ.ಶ್ರೀನಿವಾಸ್, ತಾಲ್ಲೂಕು ಕೆ.ಡಿ.ಪಿ ಸಮಿತಿ ಸದಸ್ಯರಾದ ಬೀರುವಳ್ಳಿ ಆಕಾಶ್, ಇಲ್ಯಾಸ್ಪಾಷಾ, ಬೂಕನಕೆರೆ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
