ಹಾಸನ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ಅರಣ್ಯ ಇಲಾಖೆ ಹಾಸನ ವ್ಯಾಪ್ತಿಯ ಇ.ಟಿ.ಎಫ್ (ETF) ಕಂಟ್ರೋಲ್ ರೂಮ್ ತುರ್ತು ಸಹಾಯವಾಣಿಯಾಗಿ 9480817460 ಹಾಗೂ 9481991326 ಸಂಖ್ಯೆಗಳನ್ನ ಪ್ರಕಟಿಸಿದೆ. ಕಾಡಾನೆಗಳ ಚಲನವಲನ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಸಕಲೇಶಪುರ ತಾಲೂಕಿನ ಬ್ಯಾದನೆ ಗ್ರಾಮದ ಸುಂಡೆಕೆರೆ ಎಸ್ಟೇಟ್, ಹಳ್ಳಿಹಿತ್ತಲು ಗ್ರಾಮದ ಕುಮಾರ್ ಅವರ ತೋಟ, ಹೆಬ್ಬನಹಳ್ಳಿ ಗ್ರಾಮದ ಚಂಗನಹಳ್ಳಿ ಕಾಡು ಹಾಗೂ ಸುಳ್ಳಕ್ಕಿ-ಮೇಘಲಕೆರೆ ಭಾಗದ ತೋಟಗಳ ಸುತ್ತಮುತ್ತ ಕಾಡಾನೆಗಳು ಕಾಣಿಸಿಕೊಂಡಿವೆ.
ಹೆತ್ತೂರು ಯಸಳೂರು ಹೋಬಳಿಯ ದುಡ್ಡಳ್ಳಿ ಗ್ರಾಮದ ಕುಪ್ಪಳ್ಳಿ ಕಾಡು, ಬೆಕ್ಕನಹಳ್ಳಿ ಗ್ರಾಮದ ಕಾರೆಕೊಪ್ಪಲು ಬೆಟ್ಟ, ಕೊಂಗಳ್ಳಿ ಬೆಟ್ಟ, ಹಳ್ಳಿಯೂರು ಗ್ರಾಮದ ಏಕ ರಿಸಾರ್ಟ್ ಹಿಂಭಾಗದ ಅಕೇಶಿಯಾ ಪ್ಲಾಂಟೇಶನ್, ಹಡ್ಲುಗದ್ದೆ, ಕಿರ್ಕಳ್ಳಿ ಹಾಗೂ ಹಾಡ್ಯ ಗ್ರಾಮಗಳ ಸುತ್ತಮುತ್ತಲೂ ಕಾಡಾನೆಗಳ ಹಿಂಡು ಸಂಚರಿಸುತ್ತಿದೆ.
ಇದೇ ರೀತಿ ಬೇಲೂರು ತಾಲೂಕಿನ ಹೆಗ್ಗದ್ದೆ ಎಸ್ಟೇಟ್, ಸಾಲ್ದಾನ್ ಎಸ್ಟೇಟ್, ಬಾಳಗುಲಿ ಗ್ರಾಮದ ಇಂದ್ರಗಿರಿ ಎಸ್ಟೇಟ್ ಹಾಗೂ ಬಕ್ಕರವಳ್ಳಿ ಭಾಗದ ತೋಟಗಳಲ್ಲಿಯೂ ಕಾಡಾನೆಗಳ ಕಾಣಿಕೆ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು, ಒಬ್ಬರೇ ಸಂಚರಿಸದೇ ಗುಂಪಾಗಿ ಹೋಗುವುದು, ಕಾಡು ಪ್ರದೇಶಗಳತ್ತ ಅನಾವಶ್ಯಕವಾಗಿ ಹೋಗದಿರುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.
