ದಾವಣಗೆರೆ, ಮೇ 05: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕನ್ನಡ ನಾಡು-ನುಡಿ ವೈಭವ ಅನಾವರಣಗೊಂಡಿತು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಆಯೋಜಿಸಿತ್ತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನಾಗರಕಟ್ಟೆಯ “ಕರುನಾಡ ಗಾನ ಕೋಗಿಲೆ” ಎಂದು ಖ್ಯಾತಿ ಪಡೆದ ಹನುಮಂತ ನಾಯ್ಕ ಸಿ ಅವರ ನಾಡು-ನುಡಿ ಗಾಯನ ಗಮನ ಸೆಳೆಯಿತು. “ಓ ಭಾರತ ಮಾತೆಯ ಕುವರ ಕರ್ನಾಟಕವೆ…” ಸೇರಿದಂತೆ ಕನ್ನಡಾಭಿಮಾನ ಗೀತೆಗಳನ್ನು ಭಾವಪೂರ್ಣವಾಗಿ ಹಾಡಿ ಸಭಿಕರ ಮನಗೆದ್ದರು.
ಹನುಮಂತ ನಾಯ್ಕ ಅವರ ಗಾಯನದಲ್ಲಿ ಕನ್ನಡದ ಸಂಸ್ಕೃತಿ, ಪರಂಪರೆ ಹಾಗೂ ಆತ್ಮಗೌರವದ ಸಂದೇಶ ಸ್ಪಷ್ಟವಾಗಿ ಮೂಡಿಬಂದಿತು. ಇವರ ಪ್ರದರ್ಶನವನ್ನು ಮೆಚ್ಚಿದ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಹಾಗೂ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಸೇರಿದಂತೆ ಹಲವರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಜಿ.ಇ. ಅಜ್ಜಪ್ಪ, ಸುಮತಿ ಜಯಪ್ಪ, ಕೆ.ಸಿ. ಲಿಂಗರಾಜ್, ಸತ್ಯಭಾಮ ಮಂಜುನಾಥ್, ಪರಿಮಳ ಜಗದೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಹನುಮಂತ ನಾಯ್ಕ ಅವರ ಗಾಯನವನ್ನು “ಕನ್ನಡ ನಾಡಿಗೆ ವರದಾನ” ಎಂದು ಪ್ರಶಂಸಿಸಿದರು.
ಪ್ರಸ್ತುತ ಹನುಮಂತ ನಾಯ್ಕ ಸಿ ಅವರು ದಾವಣಗೆರೆ ನಗರದ ದುಗ್ಗಮ್ಮಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಗಾಯನದ ಮೂಲಕ ಕನ್ನಡ ಭಾಷೆಯ ಸೌಂದರ್ಯವನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತ್ಯಾಸಕ್ತರು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡದ ಬೆಳವಣಿಗೆಗೆ ಪ್ರೇರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
