ಹೊಳೆನರಸೀಪುರ: ಪವಿತ್ರ ಹೇಮಾವತಿ ನದಿ ತೀರದಲ್ಲಿರುವ, ಭಕ್ತಿ ವರ್ಧನ ಕ್ಷೇತ್ರವೆಂದು ಇತಿಹಾಸ ಪ್ರಸಿದ್ಧವಾದ, ಸಾಕ್ಷಾತ್ ವಸಿಷ್ಠ ಮಹರ್ಷಿಗಳಿಗೆ ಪ್ರತ್ಯಕ್ಷ ದರ್ಶನ ನೀಡಿ ಹೊಳೆವ ನೃಸಿಂಹ ಪುರಿ ಎಂದೇ ಪ್ರಖ್ಯಾತವಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಯವರ ಬ್ರಹ್ಮ ರಥೋತ್ಸವ ಇಂದು ಸುಸಂಪನ್ನವಾಗಿ ನೆರವೇರಿತು.
ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಶ್ರೇಯಸ್ ಪಟೇಲ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಪಟ್ಟಣದ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತ ಜನ, ಅಲಂಕೃತ ರಥಕ್ಕೆ ಹಣ್ಣು ಜವನ ಎಸೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
ಹಾಗೆಯೇ ಪುರಸಭೆ ಮತ್ತು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಪಟ್ಟಣದ ಗಣ್ಯಾತಿ ಗಣ್ಯರು ಶ್ರೀ ಸಾಮಾನ್ಯರು ಸೇರಿದಂತೆ ಸಾವಿರಾರು ಭಕ್ತಾದಿಗಳು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯವರ ಮಹಾ ರಥೋತ್ಸವಕ್ಕೆ ಸಾಕ್ಷಿಯಾದರು. ಪಟ್ಟಣದ ರಾಜಬೀದಿಗಳಲ್ಲಿ ಅಲಂಕೃತ ರಥ ಸಾಗಿತು. ಈ ದೃಶ್ಯವನ್ನು ಅಪಾರ ಮಂದಿ ಕಣ್ಣುಂಬಿಕೊಂಡರು.

ರಥ ಎಳೆದ ಸಂಸದ: ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವದಲ್ಲಿ ಸಂಸದ ಶ್ರೇಯಸ್ ಪಟೇಲ್ ಪಾಲ್ಗೊಂಡು ರಥ ಎಳೆಯುವುದರ ಜೊತೆಗೆ ವಿಶೇಷ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಂಸದರು, ವಿವಿಧೆಡೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದು, ಭಕ್ತಾದಿಗಳು ನಿತ್ಯವೂ ತಮ್ಮ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳುವುದರ ಮೂಲಕ ಮಾದರಿಯಾಗಿ ಜೀವನ ರೂಪಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ನಂತರ ಭಕ್ತಾದಿಗಳೊಂದಿಗೆ ಕೋಟೆ ರಾಜಬೀದಿ ಮೂಲಕ ಸಾಗಿ, ಕೋಟೆ ಮಾರಮ್ಮನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ರಥೋತ್ಸವದ ಪ್ರಯುಕ್ತ ರಸ್ತೆ ಬದಿಯಲ್ಲಿಮಾರಾಟ ಮಾಡುವ ತಿಂಡಿ ತಿನಿಸು ಸೇವಿಸಿ ತಮ್ಮ ಸರಳತೆ ಮೆರೆದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಟಿ.ಲಕ್ಷ್ಮಣ, ಪುರಸಭಾ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಮುಖಂಡರಾದ ರವಿಕುಮಾರ್, ಸುದರ್ಶನ್ ಬಾಬು, ಪವನ ಕುಮಾರ್, ಉಮೇಶ್, ಸತೀಶ್, ಮೊದಲಾದವರಿದ್ದರು.
