ಶ್ಲೋಕ – 35
ಸಂಜಯ ಉವಾಚ ।
ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯ ಏವಾSಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ॥೩೫॥
ಸಂಜಯ ಉವಾಚ- ಸಂಜಯ ಹೇಳಿದನು :
ಏತತ್ ಶ್ರುತ್ವಾ ವಚನಮ್ ಕೇಶವಸ್ಯ ಕೃತಾಂಜಲಿ ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯಃ ಏವ ಆಹ ಕೃಷ್ಣಮ್ ಸ ಗದ್ಗದಮ್ ಭೀತ ಭೀತಃ ಪ್ರಣಮ್ಯ—ಕೃಷ್ಣನ ಈ ಮಾತನ್ನಾಲಿಸಿದ ಅರ್ಜುನ ಕೈಮುಗಿದು ನಡುಗುತ್ತ ಪೊಡಮಟ್ಟು, ಗದ್ಗದಿಸುತ್ತ, ಅಳುಕುತ್ತ, ಮತ್ತೊಮ್ಮೆ ಮಣಿದು ಮತ್ತೆ ಕೃಷ್ಣನ ಮುಂದೆ ನುಡಿದನು.
ಕೃಷ್ಣನ ಮಾತನ್ನು ಕೇಳಿದ ಅರ್ಜುನ ಭಕ್ತಿಯಿಂದ ಭಗವಂತನಿಗೆ ಕೈ ಮುಗಿದ. ಈ ಸ್ಥಿತಿಯಲ್ಲಿ ಆತ ತತ್ತರಿಸಿ ನಡುಗುತ್ತಿದ್ದಾನೆ. ತನ್ನ ಸರ್ವಾಂಗದಿಂದ ಭಗವಂತನಿಗೆ ನಮಸ್ಕರಿಸಿ, ಗದ್ಗಿತನಾಗಿ ಮಾತನಾಡಿದ.
ಇಲ್ಲಿ ಸಂಜಯ ಭಗವಂತನನ್ನು ‘ಕೇಶವ’ ಮತ್ತು ‘ಕೃಷ್ಣ’ ಎಂದು ಸಂಬೋಧಿಸಿದ್ದಾನೆ. ಕೇಶವ ಎಂದರೆ ಜಗತ್ತಿನ ಸೃಷ್ಟಿ ಮತ್ತು ಸಂಹಾರದ ಮೂಲದಲ್ಲಿರುವ ಶಕ್ತಿಗಳಾದ ಬ್ರಹ್ಮ-ರುದ್ರರನ್ನು ಸೃಷ್ಟಿ-ಸಂಹಾರದಲ್ಲಿ ತೊಡಗಿಸಿ ನಿಯಂತ್ರಿಸುವವ. ಸಮಸ್ತ ಜೀವಜಾತದೊಳಗಿದ್ದು, ಅವರನ್ನು ನಿಯಂತ್ರಿಸುವ ಸರ್ವಾಂತರ್ಯಾಮಿ ಭಗವಂತ ಕೇಶವ. ಇನ್ನು ‘ಕೃಷ್ಣ’ ಎನ್ನುವುದು ಭಗವಂತನ ಮೂಲ ನಾಮ ಕೂಡ ಹೌದು. ನಮ್ಮ ಅಹಂಕಾರವನ್ನು, ಅಜ್ಞಾನವನ್ನು ಕರ್ಷಣೆ ಮಾಡುವ, ಇಡೀ ಲೋಕವನ್ನು ಆಕರ್ಷಣೆ ಮಾಡುವ ಭಗವಂತ, ಸಂಸಾರದಿಂದ ನಮ್ಮನ್ನು ಕರ್ಷಣೆ ಮಾಡುವ ‘ಕೃಷ್ಣ’.
