ಪರಾಮರಿಬೋ: ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಕ್ಯಾರಿಬಿಯನ್ ರಾಷ್ಟ್ರಗಳ ಪ್ರವಾಸದ ಭಾಗವಾಗಿ ಸುರಿನಾಮ್ಗೆ ಭೇಟಿ ನೀಡಿ, ಭಾರತ–ಸುರಿನಾಮ್ ಅಭಿವೃದ್ಧಿ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿದರು. ಮೇ 2ರಿಂದ 10ರವರೆಗೆ ನಡೆದ ಮೂರು ರಾಷ್ಟ್ರಗಳ ಪ್ರವಾಸದ ವೇಳೆ ಅವರು ಸುರಿನಾಮ್ ರಾಜಧಾನಿ ಪರಾಮರಿಬೋದಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಭಾರತದ ಸಹಾಯದಿಂದ ನಿರ್ಮಿಸಲಾದ “ಅಗ್ರೋ ಪ್ಯಾಷನ್ ಫ್ರೂಟ್ ಪ್ರೊಸೆಸಿಂಗ್ ಫೆಸಿಲಿಟಿ”ಯನ್ನು ಜೈಶಂಕರ್ ಉದ್ಘಾಟಿಸಿದರು. 2025ರಲ್ಲಿ ಘೋಷಿಸಲಾದ 10 ಲಕ್ಷ ಅಮೆರಿಕನ್ ಡಾಲರ್ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅನುದಾನದಡಿ ಈ ಯೋಜನೆ ನಿರ್ಮಾಣಗೊಂಡಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸ್ಥಳೀಯ ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗಿದೆ.
ಈ ಸಂದರ್ಭದಲ್ಲಿ ಸುರಿನಾಮ್ ವಿದೇಶಾಂಗ ಸಚಿವ ಮೆಲ್ವಿನ್ ಬೌವಾ ಅವರೊಂದಿಗೆ 9ನೇ ಭಾರತ–ಸುರಿನಾಮ್ ಸಂಯುಕ್ತ ಆಯೋಗ ಸಭೆಗೆ ಜೈಶಂಕರ್ ಸಹಾಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ರಕ್ಷಣಾ ಮತ್ತು ಭದ್ರತೆ, ಆರೋಗ್ಯ, ವ್ಯಾಪಾರ, ಮೂಲಸೌಕರ್ಯ, ಶಿಕ್ಷಣ, ಕ್ರೀಡೆ, ಸಂಸ್ಕೃತಿ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಹಾಗೂ ಕೃಷಿ ಕ್ಷೇತ್ರಗಳ ಸಹಕಾರ ಕುರಿತು ಚರ್ಚಿಸಲಾಯಿತು.
ಜೈಶಂಕರ್ ಅವರು ಸುರಿನಾಮ್ ಅಧ್ಯಕ್ಷೆ ಜೆನ್ನಿಫರ್ ಗೀರ್ಲಿಂಗ್ಸ್-ಸೈಮನ್ಸ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದರು. ಜೊತೆಗೆ ರಾಷ್ಟ್ರೀಯ ಸಭೆಯ ಅಧ್ಯಕ್ಷ ಅಶ್ವಿನ್ ಅಧಿನ್ ಅವರನ್ನೂ ಭೇಟಿ ಮಾಡಿದರು.
ಭಾರತದ ಐಟಿಇಸಿ (India Technical and Economic Cooperation) ತರಬೇತಿ ಯೋಜನೆಯಡಿ ಸುರಿನಾಮ್ನ ಸೇನೆ ಮತ್ತು ಪೊಲೀಸ್ ಸಿಬ್ಬಂದಿಗೆ ನೀಡಲಾಗುತ್ತಿದ್ದ ತರಬೇತಿ ಅವಕಾಶಗಳನ್ನು 6ರಿಂದ 34ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತ ಸುರಿನಾಮ್ಗೆ ಲೈನ್ ಆಫ್ ಕ್ರೆಡಿಟ್ ಯೋಜನೆಯಡಿ ಮೂಲಸೌಕರ್ಯ ಮತ್ತು ವಿವಿಧ ಅಭಿವೃದ್ಧಿ ಕ್ಷೇತ್ರಗಳಿಗೆ ನೆರವು ನೀಡುತ್ತಿದ್ದು, ಎರಡು ರಾಷ್ಟ್ರಗಳ ನಡುವಿನ ಸಹಕಾರ ಇನ್ನಷ್ಟು ವಿಸ್ತರಿಸುತ್ತಿದೆ.
