ರಾಮನಾಥಪುರ: ಇಲ್ಲಿನ ಸುಬ್ರಹ್ಮಣ್ಯನಗರದಲ್ಲಿರುವ ಫಾಟ್ಲ್ ಫಾರಂ 7 ಹಾಗೂ 63ರ ವ್ಯಾಪ್ತಿಯ ತಂಬಾಕು ಹರಾಜು ಮಾರುಕಟ್ಟೆಗಳಲ್ಲಿ ಬೆಲೆ ಕುಸಿತ ಮತ್ತು ಖರೀದಿ ಮಂದಗತಿಯಿಂದ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಂದೆಡೆ ಮಾರುಕಟ್ಟೆಯಲ್ಲಿ ದರ ಪಾತಾಳಕ್ಕಿಳಿದಿದ್ದರೆ, ಮತ್ತೊಂದೆಡೆ ಮನೆಗಳಲ್ಲಿ ಹಾಗೂ ಗೋದಾಮುಗಳಲ್ಲಿ ದಾಸ್ತಾನಿಟ್ಟಿದ್ದ ಹೊಗೆಸೊಪ್ಪು ಹುಳು ಹಿಡಿದು ಕೊಳೆತು ಹಾಳಾಗುತ್ತಿರುವುದರಿಂದ ರೈತರು ಕಣ್ಣೀರಿಡುವಂತಾಗಿದೆ.

1970ರಿಂದ ಕಾರ್ಯನಿರ್ವಹಿಸುತ್ತಿರುವ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ ಸುಮಾರು 20ರಿಂದ 30 ಸಾವಿರ ರೈತರು ತಂಬಾಕು ಬೆಳೆಯುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಉತ್ಪಾದಿಸಿರುವ ಹೊಗೆಸೊಪ್ಪನ್ನು ರೈತರು ತಿಂಗಳಾನುಗಟ್ಟಲೆ ಮನೆಗಳಲ್ಲಿ ಸಂಗ್ರಹಿಸಿ ಮಾರುಕಟ್ಟೆಗೆ ತಂದಿದ್ದರು. ಆದರೆ ಈ ಬಾರಿ ನಿರೀಕ್ಷಿತ ದರ ಸಿಗದೇ ವ್ಯಾಪಾರಸ್ಥರು ಬೇಲ್ಗಳನ್ನು ಖರೀದಿಸಲು ಹಿಂದೇಟು ಹಾಕಿದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹರಾಜು ಪ್ರಾರಂಭದ ದಿನಗಳಲ್ಲಿ ಉತ್ತಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆಜಿಗೆ 320 ರಿಂದ 325 ರೂಪಾಯಿ ದರ ಲಭಿಸಿತ್ತು. ನಂತರ ದರ ಏರಿಕೆಯಾಗಬಹುದು ಎಂಬ ನಿರೀಕ್ಷೆ ರೈತರಲ್ಲಿತ್ತು. ಆದರೆ ಈಗ ಅದೇ ಗುಣಮಟ್ಟದ ತಂಬಾಕಿಗೆ 150ರಿಂದ 180 ರೂಪಾಯಿವರೆಗೆ ಇಳಿಕೆ ಕಂಡಿದ್ದು, ಕೆಳದರ್ಜೆಯ ಬೇಲ್ಗಳನ್ನು ಕೆಲವೆಡೆ ಕೇವಲ 100 ರೂಪಾಯಿಗೆ ಖರೀದಿಸಲಾಗುತ್ತಿದೆ. ಸಾಕಷ್ಟು ಬೇಲ್ಗಳಿಗೆ ಬಿಡ್ ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆಗಳಲ್ಲಿ ಹಾಗೂ ಬ್ಯಾರಲ್ಗಳಲ್ಲಿ ಹದಗೊಳಿಸಿ ಇಟ್ಟಿದ್ದ ಹೊಗೆಸೊಪ್ಪು ದೀರ್ಘಕಾಲ ದಾಸ್ತಾನಾಗಿದ್ದರಿಂದ ಸೀತ ಮತ್ತು ಹುಳು ಹಿಡಿದು ಹಾಳಾಗುತ್ತಿದೆ. ಹಲವೆಡೆ ತಂಬಾಕು ಕರಗಿ ಹಾನಿಗೊಳಗಾಗಿದ್ದು ರೈತರಿಗೆ ಆರ್ಥಿಕವಾಗಿ ಭಾರೀ ಹೊಡೆತ ಬಿದ್ದಿದೆ. ಸಾಗಾಟ ವೆಚ್ಚವೂ ಮರಳದ ಸ್ಥಿತಿಯಲ್ಲಿ ರೈತರು ಬೇಲ್ಗಳನ್ನು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ನೀಡಿ ಕೈತೊಳೆಯುತ್ತಿದ್ದಾರೆ.

ಕೇಂದ್ರ ಸರ್ಕಾರದ ಸುಂಕ ಏರಿಕೆ ಪರಿಣಾಮ
ಜನವರಿ ಮೂರನೇ ವಾರದಲ್ಲಿ ಕೇಂದ್ರ ಸರ್ಕಾರ ತಂಬಾಕು ಮೇಲಿನ ಅಬಕಾರಿ ಸುಂಕ ಮತ್ತು ಜಿಎಸ್ಟಿ ಹೆಚ್ಚಿಸುವ ಸಾಧ್ಯತೆಯನ್ನು ವಿರೋಧಿಸಿ ಕಂಪನಿಗಳು ಹರಾಜು ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿದ್ದವು. ಇದರಿಂದ ಮಾರುಕಟ್ಟೆಗೆ ತಂಬಾಕು ತಂದಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಹರಾಜು ಪುನರಾರಂಭವಾದರೂ ಆಂಧ್ರ ಪ್ರದೇಶದ ಮಾರುಕಟ್ಟೆ ದರಕ್ಕೆ ಸಮಾನ ಬೆಲೆ ನೀಡಬೇಕೆಂಬ ರೈತರ ಮನವಿಗೆ ಸ್ಪಂದನೆ ಸಿಗಲಿಲ್ಲ.
ಆಂಧ್ರ ಪ್ರದೇಶದಲ್ಲಿ ಕಳೆದ ಹರಾಜಿನಲ್ಲಿ ಉತ್ತಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆಜಿಗೆ 450 ರೂಪಾಯಿಗೂ ಹೆಚ್ಚು ದರ ಲಭಿಸಿದ್ದ ಹಿನ್ನೆಲೆ ರಾಮನಾಥಪುರ ಮಾರುಕಟ್ಟೆಯಲ್ಲೂ ಅದೇ ಮಟ್ಟದ ಬೆಲೆ ಸಿಗುವ ನಿರೀಕ್ಷೆ ಇತ್ತು. ಆದರೆ ಇಲ್ಲಿನ ಮಾರುಕಟ್ಟೆಯಲ್ಲಿ ಗರಿಷ್ಠ ದರವೂ ಇಳಿಕೆಯಾಗಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
“ಶಾಸಕರು, ಸಂಸದರು ಏಕಿರಬೇಕು?” – ರೈತ ಮುಖಂಡರ ಆಕ್ರೋಶ
“ಮಾರುಕಟ್ಟೆಯಲ್ಲಿ ಬೆಲೆ ಸುಧಾರಣೆ ಕಾಣದೆ ರೈತರು ತತ್ತರಿಸಿದ್ದಾರೆ. ಉತ್ತಮ ಗುಣಮಟ್ಟದ ತಂಬಾಕಿಗೂ ಕಡಿಮೆ ಬೆಲೆ ಸಿಗುತ್ತಿದೆ. ವಿದೇಶಗಳಲ್ಲಿ ಇಲ್ಲಿನ ಹೊಗೆಸೊಪ್ಪಿಗೆ ಉತ್ತಮ ಬೇಡಿಕೆ ಇದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ದರಕ್ಕೆ ಖರೀದಿಸಲಾಗುತ್ತಿದೆ. ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ನಮ್ಮ ಗೋಳು ಕೇಳುವವರೇ ಇಲ್ಲವಾಗಿದ್ದಾರೆ” ಎಂದು ರೈತ ಮುಖಂಡ ಮಲ್ಲಾಪುರದ ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ 10–12 ದಿನ ಹರಾಜು ಸಾಧ್ಯತೆ
“ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಕೆಳದರ್ಜೆಯ ಬೇಲ್ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಕೆಲ ಬೇಲ್ಗಳು ಬಿಡ್ ಆಗುತ್ತಿಲ್ಲ. ಇನ್ನೂ 10ರಿಂದ 12 ದಿನಗಳ ಕಾಲ ಹರಾಜು ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದರೆ ವರ್ತಕರು ಕೆಳದರ್ಜೆಯ ಬೇಲ್ಗಳನ್ನು ಖರೀದಿಸಬಹುದು” ಎಂದು ತಂಬಾಕು ಹರಾಜು ಅಧೀಕ್ಷಕ ಕೋಟೇಶ್ ರಾವ್ ತಿಳಿಸಿದ್ದಾರೆ.
– ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
