ಮೂಡಿಗೆರೆ: ಕಳೆದ ಒಂದು ವಾರದಿಂದ ರಸ್ತೆ ಕಾಮಗಾರಿ ಅಪೂರ್ಣವಾಗಿ ಬಿಟ್ಟಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸಾಜೀದ್ ಬಣಕಲ್ ಆರೋಪಿಸಿದ್ದಾರೆ.

ಈ ರಸ್ತೆಯ ಮೂಲಕ ಪ್ರತಿದಿನ ನೂರಾರು ಜನರು ಸಂಚರಿಸುತ್ತಿದ್ದು, ಮಳೆಗಾಲ ಹಿನ್ನೆಲೆ ರಸ್ತೆಯ ದುಸ್ಥಿತಿಯಿಂದ ವೃದ್ಧರು, ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿಗಳು ಓಡಾಡಲು ಪರದಾಡುವಂತಾಗಿದೆ. ಅಪೂರ್ಣ ಕಾಮಗಾರಿಯಿಂದ ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳಿಲ್ಲದೆ ಕಾಮಗಾರಿ ನಿಲ್ಲಿಸಿರುವುದರಿಂದ ವಾಹನ ಸವಾರರಿಗೆ ಸಂಚಾರ ದುಸ್ತರವಾಗಿದೆ. ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
