ತುಮಕೂರು: ಕೃತಕ ಬುದ್ಧಿಮತ್ತೆ ರೋಬೋಟಿಕ್ಸ್, ಆಟೋಮೇಷನ್, ಐಒಟಿ ಹಾಗೂ ಆಧುನಿಕ ಕೈಗಾರಿಕಾ ಕ್ಷೇತ್ರಗಳಲ್ಲಿ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟಕ್ಕೆ ಸಮರ್ಥ ವೃತ್ತಿಪರರನ್ನಾಗಿ ರೂಪಿಸುಸ ಸಂಬಂಧ ಬೆಂಗಳೂರಿನ ‘ಅಡ್ವಾನ್ಸ್ಡ್ ಮೆಕ್ಯಾನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಜೊತೆ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.
ನಗರ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರದ ಸಹಭಾಗಿತ್ವದಡಿಯಲ್ಲಿ ಮಂಗಳವಾರದಂದು ನಡೆದ ಜಂಟಿ ಒಡಂಬಡಿಕೆ ಸಭೆ ನಂತರ ‘ಅಡ್ವಾನ್ಸ್ಡ್ ಮೆಕ್ಯಾನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯೊಂದಿಗೆ ಪ್ರಮುಖ ಶೈಕ್ಷಣಿಕ ಮತ್ತು ಕೈಗಾರಿಕಾ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ. ನಡಕಟ್ಟಿ ಅವರು ಮಾತನಾಡಿ “ರೋಬೋಟಿಕ್ಸ್ ಹಾಗೂ ಎಐ ಕ್ಷೇತ್ರದಲ್ಲಿ ಉದ್ಯಮದೊಂದಿಗೆ ಮಾಡಿಕೊಂಡಿರುವ ಒಪ್ಪಂದವು ಕಾಲೇಜಿನ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ. ಚೀನಾ, ಸ್ವೀಡನ್ ಮುಂತಾದ ವಿದೇಶಗಳಲ್ಲಿ ವೈದ್ಯಕೀಯ, ಹೋಟೆಲ್ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ರೋಬೋಟ್ಗಳ ಬಳಕೆ ವ್ಯಾಪಕವಾಗಿದೆ. ಭಾರತದಲ್ಲೂ ದಿನನಿತ್ಯದ ಚಟುವಟಿಕೆಗಳು ಹಾಗೂ ಸೇವಾ ಕ್ಷೇತ್ರಗಳಲ್ಲಿ ರೋಬೋಟಿಕ್ಸ್ ಕ್ರಾಂತಿ ಆರಂಭವಾಗುತ್ತಿದ್ದು, ಈ ಒಪ್ಪಂದವು ವಿದ್ಯಾರ್ಥಿಗಳ ಇಂಟರ್ನ್ಶಿಪ್, ಪ್ರಾಯೋಗಿಕ ತರಬೇತಿ ಮತ್ತು ಸಂಶೋಧನೆಗೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ ಎಂದರು.
ಎಎಂಎಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಸಿ.ಶಶಿಧರ್ ಮಾತನಾಡಿ ಅಮೆರಿಕಾ ಮೂಲದ ಈಎಜಿಬಿ ರೋಬೋಟಿಕ್ಸ್’ ಜೊತೆ ಸಹಭಾಗಿತ್ವ ಹೊಂದಿದ್ದು, ಭಾರತದಲ್ಲಿ ವಿಶೇಷ ‘ಸರ್ವಿಸ್ ರೋಬೋಟ್ಗಳನ್ನು’ ತಯಾರಿಸುತ್ತಿದೆ. ಈ ರೋಬೋಟ್ಗಳು ರೈಲುಗಳ ಕೆಳಭಾಗವನ್ನು ಕೂಲಂಕಷವಾಗಿ ತಪಾಸಣೆ ಮಾಡಲಿವೆ. ರೈಲುಗಳ ಗಾಲಿ, ಚಕ್ರಗಳ ಗಾತ್ರ, ಬೋಲ್ಟ್ಗಳ ಸಡಿಲಿಕೆ ಹಾಗೂ ಹಾನಿಯನ್ನು ಇದು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ವರದಿ ನೀಡುತ್ತದೆ. ಈ ಹಿಂದೆ 6 ಗಂಟೆ ತೆಗೆದುಕೊಳ್ಳುತ್ತಿದ್ದ ತಪಾಸಣಾ ಕಾರ್ಯವನ್ನು ಈ ರೋಬೋಟ್ ಕೇವಲ 2 ಗಂಟೆಗಳಲ್ಲಿ ಪೂರ್ಣಗೊಳಿಸಲಿದೆ ಎಂದರು.
ಈ ಸಂದರ್ಭದಲ್ಲಿ ಎಎಂಎಸ್ ಸಂಸ್ಥೆಯ ನಿರ್ದೇಶಕರಾದ ಬೋರಿಸ್ ಜೊಲೊಟೇಕ್ನರ್, ವ್ಯವಸ್ಥಾಪಕ ನಿರ್ದೇಶಕರಾದ ಚೇತನ್, ಎಸ್ಎಸ್ಐಟಿ ಡೀನ್ಗಳಾದ ಡಾ. ರೇಣುಕಲತಾ ಎಸ್ ಮತ್ತು ಡಾ. ದಿವ್ಯಪ್ರಭಾ ಸಹಾಯಕ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಸುಮಾ ಆರ್, ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ವಿಭಾಗದ ಮುಖ್ಯಸ್ಥರಾದ ಡಾ. ಸುಮನಾ ಎಲ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.
– ಚಂದ್ರಚೂಡ ಕೆ.ಬಿ.
