ಚನ್ನರಾಯಪಟ್ಟಣ: ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ನಾಯಕತ್ವದ ಗುಣಗಳು ಬೆಳೆಯುವುದರ ಜೊತೆಗೆ ಶಿಸ್ತು, ಧೈರ್ಯ ಹಾಗೂ ಸಮಯ ನಿರ್ವಹಣೆಯ ಅರಿವು ಮೂಡುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಬಾಗೂರು ಹೋಬಳಿಯ ಗೋವಿನಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಎಂ. ಶಿವರ ಸರ್ಕಲ್ ಕದಂಬ ಪ್ರೀಮಿಯರ್ ಲೀಗ್–1.0 ಮೊದಲನೇ ವರ್ಷದ ಸಿ.ಎನ್.ಬಿ ಕಪ್ ಟಿ–10 ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ದೊರೆಯುತ್ತದೆ. ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಕ್ರಿಕೆಟ್ ಯುವಕರಲ್ಲಿ ಶಿಸ್ತು, ಧೈರ್ಯ, ತಂಡದೊಂದಿಗೆ ಕೆಲಸ ಮಾಡುವ ಮನೋಭಾವ ಹಾಗೂ ಸಮಯ ನಿರ್ವಹಣೆಯಂತಹ ಗುಣಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.

ಭಾರತ 1983ರಲ್ಲಿ ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು. ಸುನಿಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್ ಸೇರಿದಂತೆ ಹಲವು ದಿಗ್ಗಜ ಆಟಗಾರರಿಂದಾಗಿ ಭಾರತದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿದೆ. 2027ರ ವಿಶ್ವಕಪ್ಗಾಗಿ ಪ್ರತಿಭಾವಂತ ಹಾಗೂ ಅರ್ಹ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಬಲಿಷ್ಠ ತಂಡವನ್ನು ರೂಪಿಸಬೇಕು ಎಂದು ಹೇಳಿದರು.

ಬಾಗೂರು ಹೋಬಳಿಯ ಕೆರೆಗಳಿಗೆ ಕಳೆದ ವರ್ಷ ಹೇಮಾವತಿ ನದಿ ನೀರು ಹರಿಸಿರುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಇದರಿಂದ ರೈತರು ತಮ್ಮ ತೆಂಗಿನ ಬೆಳೆಗಳನ್ನು ಉಳಿಸಿಕೊಳ್ಳಲು ಅನುಕೂಲವಾಗಿದೆ. ಕೊಳವೆ ಬಾವಿಗಳಲ್ಲಿಯೂ ನೀರು ಲಭ್ಯವಿದ್ದು, ಈ ಭಾಗದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಂ.ಆರ್. ಅನಿಲ್ ಕುಮಾರ್ ಮಾತನಾಡಿ, ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆಯ ಮೂಲಕ ಈ ಭಾಗದ ಕೆರೆಗಳಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಹೇಮಾವತಿ ನದಿ ನೀರು ಹರಿಸಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕಳೆದ 13 ವರ್ಷಗಳಿಂದ ಬಾಗೂರು ಹೋಬಳಿಯನ್ನು ಮಾದರಿ ಹೋಬಳಿಯನ್ನಾಗಿ ರೂಪಿಸಲು ಶಾಸಕರು ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಎಚ್. ಶಿವಣ್ಣ, ವಿ.ಎನ್. ಮಂಜುನಾಥ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮರಿದೇವೇಗೌಡ, ಮಾಜಿ ಸದಸ್ಯ ಬಸವರಾಜ್, ಜೆಡಿಎಸ್ ಮುಖಂಡರಾದ ಕುಂಬಾರಹಳ್ಳಿ ರಮೇಶ್, ನೆಟ್ಟೆಕೆರೆ ನಾಗರಾಜ್, ಬಿ.ಕೆ. ಮನು, ಎಸ್.ಡಿ. ಪುರುಷೋತ್ತಮ್, ಗೋವಿನಕೆರೆ ರಾಮಚಂದ್ರ, ರಮೇಶ್, ಭೂದೇಶ್, ವಕೀಲ ಧರಣೇಶ್ ಸೇರಿದಂತೆ ಕದಂಬ ಪ್ರೀಮಿಯರ್ ಲೀಗ್ ಸದಸ್ಯರಾದ ಕಾಮನಹಳ್ಳಿ ರವಿಶಂಕರ್ (ರಾಕಿ), ಮರಗೂರು ಪುನೀತ್, ಶ್ರೀನಿವಾಸ್, ಕಲ್ಲೇಸೋಮನಹಳ್ಳಿ ರಾಜೀವ್, ಮಾದಗುಡ್ಡನಹಳ್ಳಿ ರಾಕೇಶ್, ಶರತ್ ಹಾಗೂ ಇತರರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
