ಕೊರಟಗೆರೆ: ತಾಲೂಕಿನ ತಣ್ಣೇನಹಳ್ಳಿ ಗ್ರಾಮದ ಶ್ರೀ ಮಾರುತಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಲಾದ “ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣನ ಸಂಧಾನ” ಪೌರಾಣಿಕ ನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಸಮಾಜಸೇವಕರಾದ , ತಣ್ಣೇನಹಳ್ಳಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಪೌರಾಣಿಕ ನಾಟಕ ಅತ್ಯಂತ ಅದ್ಭುತವಾಗಿ ಮೂಡಿ ಬರುತ್ತಿದ್ದು, ವಿಶೇಷವಾಗಿ ಅರ್ಜುನ ಮತ್ತು ಬಲರಾಮ ಪಾತ್ರಧಾರಿಗಳ ಅಭಿನಯ ಮನಸೂರೆಗೊಂಡಿದೆ ಎಂದು ಹೇಳಿದರು.

ತಾವು 2005ರಿಂದ 2010ರವರೆಗೆ ಕೋಳಾಲ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಜನಪರ ಕೆಲಸಗಳನ್ನು ಮಾಡಿರುವುದನ್ನು ಸ್ಮರಿಸಿದ ಅವರು, ಕಳೆದ ಮೂರು ತಿಂಗಳಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪೌರಾಣಿಕ ನಾಟಕಗಳು, ಜಾತ್ರೆಗಳು, ದೇವಸ್ಥಾನ ಕಾರ್ಯಕ್ರಮಗಳು ಹಾಗೂ ಮದುವೆ ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.

ಕಳೆದ 20 ವರ್ಷಗಳಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರ ಎಸ್.ಸಿ ಮೀಸಲು ಕ್ಷೇತ್ರವಾಗಿತ್ತು. ಮುಂದಿನ ದಿನಗಳಲ್ಲಿ ಕ್ಷೇತ್ರ ಸಾಮಾನ್ಯ ಕ್ಷೇತ್ರವಾದರೆ ತಾವು ಅಥವಾ ತಮ್ಮ ಧರ್ಮಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಶತಸಿದ್ಧ ಎಂದು ಘೋಷಿಸಿದರು.

ಇನ್ನೂ 45 ದಿನಗಳಲ್ಲಿ ಮಾವುತೂರ ಅರಸಮ್ಮ ದೇವಿ ಸಮೀಪ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಉಚಿತ ನೂತನ ಸಮುದಾಯ ಭವನವನ್ನು ಉದ್ಘಾಟಿಸಲಾಗುವುದು ಎಂದರು. ಈ ಕಾರ್ಯಕ್ರಮಕ್ಕೆ ಸುಮಾರು 25 ಸಾವಿರ ಜನರನ್ನು ಆಹ್ವಾನಿಸುವ ಯೋಜನೆ ಇದೆ. ಜೊತೆಗೆ ಮಹಿಳೆಯರಿಗೆ ರೇಷ್ಮೆ ಸೀರೆ ಹಾಗೂ ಬಾಗಿನ, ಪುರುಷರಿಗೆ ಬಟ್ಟೆ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯೂ ಇರಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೋವಿಂದ್ ರೆಡ್ಡಿ, ಯತೀಶ್, ಅವಳಿ ರಮೇಶ್, ಮಾಜಿ ಸದಸ್ಯರಾದ ಶಿಲ್ಪ, ಮೆಡಿಕಲ್ ಹನುಮಂತು, ವಜ್ಜಿನಕುರಿಕೆ ರಂಗನಾಥ್ ಸೇರಿದಂತೆ ಗ್ರಾಮಸ್ಥರು ಹಾಗೂ ಪಿ.ಎನ್.ಕೆ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
