ಕೆ.ಆರ್.ಪೇಟೆ,ಆ.11: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಾಚಗೋನಹಳ್ಳಿ ಗ್ರಾಮದ ಎಲ್ಲೆಯಲ್ಲಿರುವ ಸರ್ವೆ ನಂ. 23ರ ಅರಣ್ಯ ಭೂಮಿಯಲ್ಲಿದ್ದ ಬೆಲೆ ಬಾಳುವ ವಿವಿಧ ಜಾತಿಯ ಸಸಿಗಳನ್ನು ಕಡಿದು ಹಾಕಿ ಭೂಮಿಯನ್ನು ಅತಿಕ್ರಮಿಸಲು ಬಲಾಢ್ಯ ವ್ಯಕ್ತಿಗಳು ಯತ್ನಿಸಿರುವ ಘಟನೆ ನಡೆದಿದೆ.

ರಾತ್ರೋರಾತ್ರಿ ಜೆಸಿಬಿ ಯಂತ್ರದ ಮೂಲಕ ಅರಣ್ಯ ಪ್ರದೇಶದಲ್ಲಿದ್ದ ವಿವಿಧ ಜಾತಿಯ ನೂರಾರು ಮರಗಳನ್ನು ನಾಶಪಡಿಸಿರುವ ದುಷ್ಕರ್ಮಿಗಳು ಭೂಮಿಯನ್ನು ಸಮತಟ್ಟು ಮಾಡಿ ಬಳಿಕ ತೆಂಗಿನ ಸಸಿಗಳನ್ನು ನೆಡುವ ಮೂಲಕ ಸುಮಾರು ಎರಡು ಎಕರೆಯಷ್ಟು ಅರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸಿದ್ದಾರೆ ಎಂದು ಮಾಚಗೋನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಅರಣ್ಯ ಪ್ರದೇಶಕ್ಕೆ ಅತಿಕ್ರಮಣ ಮಾಡಿ ಬೆಲೆಬಾಳುವ ಮರಗಳನ್ನು ನಾಶ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಾಚಗೋನಹಳ್ಳಿ ಗ್ರಾಮಕ್ಕೆ ಸೇರಿದ ಅರಣ್ಯ ಪ್ರದೇಶವನ್ನು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ, ಅರಣ್ಯ ನಾಶ ಮಾಡಿರುವ ಸ್ಥಳದಲ್ಲಿಯೇ ಮಾಚಗೋನಹಳ್ಳಿ ಗ್ರಾಮದ ರೈತರು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಬಂಧಪಟ್ಟ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಅರಣ್ಯ ನಾಶ ಮಾಡಿ ಸರ್ಕಾರಿ ಭೂಮಿಯನ್ನು ಕಬಳಿಸಲು ಯತ್ನಿಸಿರುವ ಮಾಚಗೋನಹಳ್ಳಿ ಗ್ರಾಮದ ಎಂ.ವಿ.ಕುಮಾರ್ ಎಂಬಾತನ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಈ ವ್ಯಕ್ತಿಯ ಮೇಲೆ ಎಫ್ಐಆರ್ ದಾಖಲಿಸಿ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಮಾಚಗೋನಹಳ್ಳಿ ಗ್ರಾಮಸ್ಥರು ಸ್ಥಳದಲ್ಲಿಯೇ ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವಿ.ಅನಿಲ್ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಎಸ್.ಬೋರಲಿಂಗೇಗೌಡ, ಎಂ.ಕೆ.ಯೋಗೇಂದ್ರ, ದಿಲೀಪ್, ಶ್ರೀಧರ್, ಜಗದೀಶ್, ರಾಜೇಗೌಡ, ದೇವರಾಜು, ರವಿಯಣ್ಣ, ಗೋಪಾಲ್, ಕಾಂತರಾಜು, ಚೇತನ್, ಮಂಜು, ಮರೀಗೌಡ, ಪ್ರಸನ್ನ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ವಿಡಿಯೋ ಕಾನ್ಪರೆನ್ಸ್ ನಂತರ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ತಾಲ್ಲೂಕು ಅರಣ್ಯ ಸಂರಕ್ಷಣಾಧಿಕಾರಿ ಡಾ.ಅನಿತಾ ಅವರು ಸಿಬ್ಬಂದಿ ವರ್ಗದವರೊಂದಿಗೆ ಬೇಟಿ ನೀಡಿ ಒತ್ತುವರಿ ಮಾಡಲಾಗಿದ್ದ ಜಾಗದಲ್ಲಿ ನೆಟ್ಟಿದ್ದ ತೆಂಗಿನ ಸಸಿಗಳನ್ನು ಕಿತ್ತುಹಾಕಿ ಅದೇ ಸ್ಥಳಕ್ಕೆ ಅರಣ್ಯ ಇಲಾಖೆಯ ವಿವಿಧ ಸಸಿಗಳನ್ನು ನೆಡಲಾಯಿತು. ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ವಾಪಸ್ ಪಡೆದರು.
– ಶ್ರೀನಿವಾಸ್ ಆರ್.
