ಕೆ.ಆರ್.ಪೇಟೆ: ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಅಹಿಂದ ವರ್ಗಗಳು ಸಂಘಟಿತರಾಗಿ ಪರ್ಯಾಯ ರಾಜಕೀಯ ಶಕ್ತಿಯನ್ನು ನಿರ್ಮಿಸಬೇಕಾದ ಅವಶ್ಯಕತೆ ಇದೆ. ಇಲ್ಲದಿದ್ದರೆ ಅಹಿಂದ ವರ್ಗಕ್ಕೆ ಅಧಿಕಾರ ಸಿಗುವುದಿಲ್ಲ ಎಂದು ಮಾಜಿ ಸಚಿವ B. Somashekar ಅಭಿಪ್ರಾಯಪಟ್ಟರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ವತಿಯಿಂದ ಪಟ್ಟಣದ ಸುಲೋಚನಮ್ಮ-ರಾಮದಾಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಬುದ್ಧ, ಬಸವ ಹಾಗೂ B. R. Ambedkar ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಮಿಳುನಾಡಿನ ರಾಜಕೀಯ ಉದಾಹರಣೆ ಉಲ್ಲೇಖಿಸಿದ ಅವರು, “ಚಿತ್ರನಟ ಹಾಗೂ ಮುಖ್ಯಮಂತ್ರಿ Vijay ಕೇವಲ ಎರಡು ವರ್ಷಗಳಲ್ಲಿ ಮಹಿಳೆಯರು ಹಾಗೂ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಜನಾಕರ್ಷಣೆಯುಳ್ಳ ನಾಯಕತ್ವ ಕರ್ನಾಟಕಕ್ಕೂ ಅಗತ್ಯ” ಎಂದರು.
ರಾಜ್ಯ ರಾಜಕೀಯದಲ್ಲಿ ಕುಟುಂಬ ರಾಜಕಾರಣ ಹೆಚ್ಚುತ್ತಿರುವುದನ್ನು ವಿಷಾದಿಸಿದ ಅವರು, “ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಇನ್ನೂ ಮರೀಚಿಕೆಯಾಗಿದೆ. 80ರ ದಶಕದ ದಲಿತ ಹಾಗೂ ರೈತ ಚಳುವಳಿಗಳಂತಹ ಬಲಿಷ್ಠ ಹೋರಾಟಗಳು ಮತ್ತೆ ಅಗತ್ಯವಿದೆ” ಎಂದು ಹೇಳಿದರು.
ದಲಿತ ಸಮುದಾಯದಲ್ಲಿ ಎಡಗೈ-ಬಲಗೈ ಭೇದಭಾವ ಬಿಟ್ಟು ಎಲ್ಲರೂ ಒಂದಾಗಿ ನಡೆದರೆ ಮಾತ್ರ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ ಎಂದು ಕರೆ ನೀಡಿದರು.

“ಅಂಬೇಡ್ಕರ್ಗೆ ಸಂವಿಧಾನ ರಚನೆ ಅವಕಾಶ ಸಿಕ್ಕದ್ದು ಹೋರಾಟದಿಂದ”
ದಲಿತಪರ ಚಿಂತಕ ಎನ್. ಕರುಣಾನಿಧಿ ಮಾತನಾಡಿ, B. R. Ambedkar ಅವರ ಸಾಮಾಜಿಕ ಹಾಗೂ ರಾಜಕೀಯ ಕೊಡುಗೆಗಳನ್ನು ಸ್ಮರಿಸಿದರು.
“ಅಂಬೇಡ್ಕರ್ ಅವರು ದಲಿತರು, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಬಗ್ಗೆ ಬ್ರಿಟಿಷರ ಕಾಲದಲ್ಲೇ ಬಲವಾದ ಚರ್ಚೆ ನಡೆಸಿದ್ದರು. ದಲಿತರ ಹಕ್ಕುಗಳಿಗಾಗಿ ಅವರು ನಿರಂತರ ಹೋರಾಟ ನಡೆಸಿದರು” ಎಂದು ಹೇಳಿದರು.
ಅಂಬೇಡ್ಕರ್ ಅವರ ಪ್ರಾಮಾಣಿಕತೆ, ಕಾರ್ಮಿಕರ ಹಕ್ಕುಗಳಿಗಾಗಿ ಮಾಡಿದ ಹೋರಾಟ ಹಾಗೂ ಮಹಿಳಾ ಹಕ್ಕುಗಳ ರಕ್ಷಣೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿದ ಅವರು, “ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆಗಳು ಇಂದಿಗೂ ಪ್ರಸ್ತುತ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಸೋಮನಹಳ್ಳಿ ಅಂದಾನಿ, ಜಿಲ್ಲಾ ಸಂಚಾಲಕ ಮದ್ದೂರು ಎಂ. ಶಿವು, ಬೆಸಗರಹಳ್ಳಿ ಬಿ.ಎಂ. ಸತ್ಯ, ಡಿ.ಕೆ. ಅಂಕಯ್ಯ ಸೇರಿದಂತೆ ಹಲವು ಮುಖಂಡರು ಹಾಗೂ ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
