ಶ್ಲೋಕ – 41 & 42
ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ ।
ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ ಪ್ರಣಯೇನ ವಾSಪಿ ॥೪೧॥
ಯಚ್ಚಾಪಹಾಸಾರ್ಥಮಸತ್ ಕೃತೋSಸಿ ವಿಹಾರಶಯ್ಯಾಸನಭೋಜನೇಷು ।
ಏಕೋSಥವಾSಪ್ಯಚ್ಯುತ ತತ್ ಸಮಕ್ಷಂ ತತ್ ಕ್ಷಾಮಯೇ ತ್ವಾಮಹಮಪ್ರಮೇಯಮ್ ॥೪೨॥
ಸಖಾ ಇತಿ ಮತ್ವಾ ಪ್ರಸಭಮ್ ಯತ್ ಉಕ್ತಮ್ ಹೇ ಕೃಷ್ಣ ಹೇ ಯಾದವ ಹೇ ಸಖೇ ಇತಿ ।
ಅಜಾನತಾ ಮಹಿಮಾನಮ್ ತವ ಇದಮ್ ಮಯಾ ಪ್ರಮಾದಾತ್ ಪ್ರಣಯೇನ ವಾSಪಿ ||
ಯತ್ ಚ ಅವಹಾಸ ಅರ್ಥಮ್ ಅಸತ್ ಕೃತಃ ಅಸಿ ವಿಹಾರ ಶಯ್ಯಾ ಆಸನ ಭೋಜನೇಷು ।
ಏಕಃ ಅಥವಾ ಅಪಿ ಅಚ್ಯುತ ತತ್ ಸಮಕ್ಷಮ್ ತತ್ ಕ್ಷಾಮಯೇ ತ್ವಾಮ್ ಅಹಮ್ ಅಪ್ರಮೇಯಮ್ –ನಿನ್ನ ಹಿರಿಮೆಯನ್ನು ಅರಿಯದೆ ಗೆಳೆಯನೆಂದು ತಿಳಿದು ದುಡುಕಿ ನುಡಿದದ್ದುಂಟು. ನನ್ನ ಎಡವಿನಿಂದ ಅಥವಾ ಸಲಿಗೆಯಿಂದ- “ಏ ಕೃಷ್ಣ, ಏ ಗೆಳೆಯ” ಎಂದು ಕರೆದದ್ದುಂಟು. ವಿಹಾರದಲ್ಲಿದ್ದಾಗ, ಮಲಗಿದ್ದಾಗ, ಕೂತಾಗ, ಊಟಮಾಡುವಾಗ- ಎಲ್ಲ ಮಾಡಿಸುವ ನಿನ್ನನ್ನು ಅಣಕಕ್ಕಾಗಿ ಕಡೆಗಣಿಸಿದ್ದುಂಟು. ಆದ್ದರಿಂದ ಓ ಕುಗ್ಗದ ಎತ್ತರವೇ, ತಿಳಿವಿಗೆಟುಕದ, ಸಾಟಿಯಿರದ ನಿನ್ನೆದುರು ಬೇಡಿಕೊಳ್ಳುತ್ತಿದ್ದೇನೆ-ಅದನೆಲ್ಲ ಮರೆತು ಮನ್ನಿಸುವಂತೆ.
ಅರ್ಜುನನಿಗೆ ತಾನು ಹಿಂದೆ ಕೃಷ್ಣನೊಂದಿಗೆ ನಡೆದುಕೊಂಡ ರೀತಿ ಬಗ್ಗೆ ಪಶ್ಚಾತ್ತಾಪವಾಗುತ್ತದೆ. ಕೃಷ್ಣ ಜಗತ್ತಿನ ಮೂಲಶಕ್ತಿ ಎನ್ನುವ ಕಲ್ಪನೆ ಇಲ್ಲದೆ ತಾನು ನಡೆದುಕೊಂಡ ರೀತಿ ಬಗ್ಗೆ ಆತ ಕೃಷ್ಣನಲ್ಲಿ ಕ್ಷೆಮೆ ಬೇಡುತ್ತಾನೆ. ತಿಳಿದೋ ತಿಳಿಯದೆಯೋ, ಬೇಜವಾಬ್ಧಾರಿಯಿಂದಲೋ ಅಥವಾ ಪ್ರೀತಿಯಿಂದಲೋ ಮಾಡಿದ ತಪ್ಪುಗಳನ್ನು ಕ್ಷಮಿಸು ಎಂದು ಆತ ಭಗವಂತನಲ್ಲಿ ಬೇಡುತ್ತಾನೆ. ಇಲ್ಲಿ ಬಂದಿರುವ ‘ಏಕ’ ಎನ್ನುವ ಪದಕ್ಕೆ ವಿಶೇಷ ಅರ್ಥವಿದೆ. ಏಕಃ ಎಂದರೆ ಸರ್ವೋತ್ತಮ ಮತ್ತು ಸರ್ವಕರ್ತ(ಏಷ ಏವ ಕರೋತಿ-ಏಕಃ). ಸರ್ವಕರ್ತ-ಸರ್ವೋತ್ತಮನಾದ ನಿನ್ನನ್ನು ಪರಿಹಾಸ್ಯ ಮಾಡಿ ಸಲುಗೆಯಿಂದ ಮಾತನಾಡಿದೆ, ನೀನು ಅಚ್ಯುತಃ. ನಿನ್ನ ಸಾಮರ್ಥ್ಯ, ಗುಣ, ದೇಹದಲ್ಲಿ ಚ್ಯುತಿ ಇಲ್ಲ. ಚ್ಯುತವಾದ ನನ್ನ ಬುದ್ಧಿಯಿಂದ ಇದನ್ನು ನಾನು ಗ್ರಹಿಸಲಿಲ್ಲ. ನಾನು ಈ ರೀತಿ ನೆಡೆದುಕೊಳ್ಳಬಾರದಿತ್ತು. ನಾನು ಮಾಡಿರುವ ಅಪರಾಧಕ್ಕೆ ನಿನ್ನ ಬಳಿ ಕ್ಷಮೆ ಬೇಡುತ್ತಿದ್ದೇನೆ. ನೀನು ಅಪ್ರಮೇಯ- ಕಾಲ-ದೇಶಗಳಿಂದ ವ್ಯಾಪ್ತನಾದ ನೀನು ನಮ್ಮ ಅರಿವಿಗೆ ಎಟುಕದವನು. ಈಗ ನನಗೆ ನನ್ನ ತಪ್ಪಿನ ಅರಿವಾಯಿತು. ಅಜ್ಞಾನದಿಂದ ತಪ್ಪು ಮಾಡುತ್ತಿದ್ದೇನೆ ಎನ್ನುವ ತಿಳುವಳಿಕೆ ಬಂತು.
