ಪರಿಷ್ಕೃತ ಕರಡು ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ; ಸೀಫುಡ್ ರಫ್ತಿಗೆ ಬಿಗಿ ನಿರೀಕ್ಷೆ
ನವದೆಹಲಿ, ಮೇ 14: ಭಾರತೀಯ ಜಲಕೃಷಿ ಉತ್ಪನ್ನಗಳ ರಫ್ತಿಗೆ ಮಹತ್ವದ ಬೆಳವಣಿಗೆಯಾಗಿ, ಯುರೋಪಿಯನ್ ಒಕ್ಕೂಟ (EU) ಪ್ರಕಟಿಸಿರುವ ಪರಿಷ್ಕೃತ ಕರಡು ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ ದೊರೆತಿದೆ. ಮೇ 12, 2026ರಂದು ಪ್ರಕಟವಾದ ಈ ಕರಡು ಪಟ್ಟಿಯಿಂದ ಸೆಪ್ಟೆಂಬರ್ 2026 ನಂತರವೂ ಭಾರತದಿಂದ ಯುರೋಪಿನ 27 ರಾಷ್ಟ್ರಗಳಿಗೆ ಜಲಕೃಷಿ ಉತ್ಪನ್ನಗಳ ರಫ್ತು ಮುಂದುವರಿಯುವ ನಿರೀಕ್ಷೆ ಮೂಡಿದೆ.
ಜಲಕೃಷಿ ಉತ್ಪನ್ನಗಳಿಗೆ ಕಟ್ಟುನಿಟ್ಟಿನ ನಿಯಮ
ಯುರೋಪಿಯನ್ ಕಮಿಷನ್ನ ನಿಯಮಾವಳಿ (EU) 2023/905 ಅನ್ವಯ, ಯುರೋಪಿಗೆ ರಫ್ತು ಮಾಡುವ ಪ್ರಾಣಿಜ ಉತ್ಪನ್ನಗಳಲ್ಲಿ ಬೆಳವಣಿಗೆ ಉತ್ತೇಜಕವಾಗಿ ಬಳಸುವ ಆಂಟಿಮೈಕ್ರೋಬಿಯಲ್ ಔಷಧಿಗಳ ಅಂಶ ಇರಬಾರದು ಎಂದು ಕಡ್ಡಾಯಗೊಳಿಸಲಾಗಿದೆ. ಮಾನವ ಚಿಕಿತ್ಸೆಗೆ ಮೀಸಲಾದ ಔಷಧಿಗಳ ಬಳಕೆಯ ಮೇಲೂ ನಿಯಂತ್ರಣ ಹೇರಲಾಗಿದೆ.
2024ರಲ್ಲಿ ಪಟ್ಟಿಯಿಂದ ಹೊರಗುಳಿದಿತ್ತು ಭಾರತ
2024ರ ಅಕ್ಟೋಬರ್ 4ರಂದು ಪ್ರಕಟವಾದ EU 2024/2598 ನಿಯಮಾವಳಿಯಲ್ಲಿ ಭಾರತಕ್ಕೆ ಅನುಮತಿ ನೀಡಲಾಗಿರಲಿಲ್ಲ. ಇದರಿಂದ ಸೆಪ್ಟೆಂಬರ್ 2026ರಿಂದ ಭಾರತದಿಂದ ಯುರೋಪಿಗೆ ಪ್ರಾಣಿಜ ಉತ್ಪನ್ನಗಳ ರಫ್ತು ನಿಲ್ಲುವ ಆತಂಕ ಉಂಟಾಗಿತ್ತು.
ಭಾರತದ ಸೀಫುಡ್ ರಫ್ತಿಗೆ EU ಪ್ರಮುಖ ಮಾರುಕಟ್ಟೆ
2025-26ನೇ ಸಾಲಿನಲ್ಲಿ ಯುರೋಪಿಯನ್ ಒಕ್ಕೂಟ ಭಾರತಕ್ಕೆ ಮೂರನೇ ಅತಿ ದೊಡ್ಡ ಸಮುದ್ರ ಆಹಾರ ರಫ್ತು ಮಾರುಕಟ್ಟೆಯಾಗಿತ್ತು. ಭಾರತದ ಒಟ್ಟು ಸೀಫುಡ್ ರಫ್ತು ಮೌಲ್ಯದ ಸುಮಾರು 18.94 ಶೇಕಡಾ ಪಾಲು EUಗೆ ಸೇರಿದ್ದು, ಇದರ ಮೌಲ್ಯ ಸುಮಾರು 1.593 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ವಿಶೇಷವಾಗಿ ಫಾರ್ಮ್ಡ್ ಶ್ರಿಂಪ್ (ಬೆಳೆಸಿದ ಚೇನು) ರಫ್ತಿನಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದೆ.
ನಿಯಮ ಪಾಲನೆಗೆ ಭಾರತದಿಂದ ಕ್ರಮ
ವಾಣಿಜ್ಯ ಇಲಾಖೆ, ಮೆರೈನ್ ಪ್ರಾಡಕ್ಟ್ಸ್ ಎಕ್ಸ್ಪೋರ್ಟ್ ಡೆವಲಪ್ಮೆಂಟ್ ಅಥಾರಿಟಿ (MPEDA) ಹಾಗೂ ಎಕ್ಸ್ಪೋರ್ಟ್ ಇನ್ಸ್ಪೆಕ್ಷನ್ ಕೌನ್ಸಿಲ್ಗಳು ಜವಾಬ್ದಾರಿಯುತ ಜಲಕೃಷಿ ಮತ್ತು ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದು EU ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿವೆ.
ಈಗ ಪರಿಷ್ಕೃತ ನಿಯಮಾವಳಿಗೆ ಯುರೋಪಿಯನ್ ಕಮಿಷನ್ ಅಧಿಕೃತ ಅನುಮೋದನೆ ನೀಡುವುದು ಅಂತಿಮ ಹಂತವಾಗಿದೆ.
