ತುಮಕೂರು- ಸಣ್ಣ ಕೈಗಾರಿಕೆಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಹಣಕಾಸು ನೆರವು, ಮಾರುಕಟ್ಟೆಯ ವಿಸ್ತರಣೆ ಮತ್ತು ಆಮದು ನೀತಿಗಳ ಕುರಿತು ಚರ್ಚೆ ನಡೆಸಲು ಕಾಸಿಯಾ ದಕ್ಷಿಣ ಭಾರತ ಎಂ.ಎಸ್.ಎಂ.ಇ. ಸಮಾವೇಶ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನವನ್ನು ನಗರದ ಅಮಾನಿಕೆರೆಯ ಗಾಜಿನಮನೆಯಲ್ಲಿ ಮೇ 22 ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾಸಿಯಾ ಅಧ್ಯಕ್ಷ ಬಿ.ಆರ್.ಗಣೇಶರಾವ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸಿಯಾ ವತಿಯಿಂದ ಆಯೋಜಿಸಲಾಗುತ್ತಿರುವ ಈ ಮೂರು ದಿನಗಳ ಕಾರ್ಯಕ್ರಮವು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು, ಸಾರ್ವಜನಿಕ ವಲಯದ ಘಟಕಗಳು, ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ನೀತಿ ನಿರೂಪಕರು ಮತ್ತು ತಾಂತ್ರಿಕ ತಜ್ಞರನ್ನು ಒಟ್ಟುಗೂಡಿಸುವ ಒಂದು ವೇದಿಕೆಯಾಗಿದೆ ಎಂದು ಹೇಳಿದರು.
ಮೇ 22 ರಂದು ಬೆಳಿಗ್ಗೆ 10.30ಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಕೇಂದ್ರ ಎಂಎಸ್ಎಂ.ಇ, ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ಶೋಭ ಕರಂದ್ಲಾಜೆ, ರಾಜ್ಯದ ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಭಾಗವಹಿಸುವರು ಎಂದರು.
ಗೌರವ ಅತಿಥಿಗಳಾಗಿ ಚಳ್ಳಕೆರೆ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಘುಮೂರ್ತಿ, ಶಾಸಕ ಕೆ.ಎನ್. ರಾಜಣ್ಣ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ವಿಶೇಷ ಅತಿಥಿಗಳಾಗಿ ಡಾ. ಎಸ್. ಸೆಲ್ವಕುಮಾರ್, ರೋಹಿಣಿ ಸಿಂಧೂರಿ ದಾಸರಿ, ಡಾ.ಕೆ.ರಾಜೇಂದ್ರ, ಎ.ಬಿ. ಬಸವರಾಜು, ಗೋವಿಂದರೆಡ್ಡಿ, ಗಂಗೂಬಾಯಿ ರಮೇಶ್ ಮಾನಕರ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ದೇವರಾಜ್ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಸಾರ್ವಜನಿಕ ವಲಯದ ಘಟಕಗಳು, ಸರ್ಕಾರಿ ಸಂಸ್ಥೆಗಳು, ಬೃಹತ್ ಕೈಗಾರಿಕೆಗಳು, ಬಹು ರಾಷ್ಟ್ರೀಯ ಕಂಪೆನಿಗಳು, ಮೂಲ ಪರಿಕರಗಳ ತಯಾರಕರಿಗೆ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಉದ್ಯಮಗಳು ತಮ್ ಉತ್ಪನ್ನಗಳು ಮತ್ತು ಸೇವೆಗಳನ್ನು ಹಾಗೂ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಜತೆಗೆ ಸೂಕ್ತವಾದ ಮಾರುಕಟ್ಟೆ ಸಂಪರ್ಕಗಳನ್ನು ಅಭಿವೃದ್ದಿಪಡಿಸಲು ಪ್ರೋತ್ಸಾಹ ನೀಡುವ ಮೂಲಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಉದ್ಯಮಗಳ ವ್ಯವಹಾರವನ್ನು ಸುಗಮಗೊಳಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದರು.
ಹೆಚ್ಎಎಲ್, ಬಿಇಎಲ್, ಬಿಹೆಚ್ಇಎಲ್ ಮತ್ತು ಎನ್ಎಸ್ಐಸಿ ಯಂತಹ ಕೇಂದ್ರ ಸಾರ್ವಜನಿಕ ವಲಯದ ಘಟಕಗಳು ಈ ಸಮಾವೇಶದಲ್ಲಿ ಭಾಗವಹಿಸುತ್ತಿವೆ. ಸದರಿ ಸಂಸ್ಥೆಗಳ ಮಾರಾಟಗಾರರಾಗಿ ಎಸ್.ಎಂ.ಇ.ಗಳನ್ನು ನೋಂದಾಯಿಸಲು ಅನುಸರಿಸುವ ಕಾರ್ಯ ವಿಧಾನಗಳ ಕುರಿತು ತಾಂತ್ರಿಕ ಅಧಿವೇಶನಗಳ ಮೂಲಕ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಎಂಎಸ್ಎಇಗಳು ಒಂದೇ ವೇದಿಕೆಯಲ್ಲಿ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ಬೃಹತ್ ಪ್ರಮಾಣದ ಘಟಕಗಳೊಂದಿಗೆ ಸಂವಹನ ನಡೆಸಲು ಅಪರೂಪದ ಈ ಅವಕಾಶವನ್ನು ಹೊಂದಿರುತ್ತವೆ ಎಂದ ಅವರು, ಎಸ್ಎಂಇಗಳ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ನೆರವು ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಐಬಿ, ಬ್ಯಾಂಕ್ ಆಫ್ ಬರೋಡ, ಸಿಡ್ಬಿ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗಳು ಈ ಮೂರು ದಿನಗಳ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿವೆ ಎಂದರು.
ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶ ಮತ್ತು ವಸ್ತು ಪ್ರದರ್ಶನದಲ್ಲಿ ರಕ್ಷಣಾ, ಏರೋಸ್ಪೇಸ್, ಮೆಷಿನ್ ಟೂಲ್, ಸಿಎನ್ಸಿ ಕ್ಲಸ್ಟರ್ಗಳು, ಮೆಷಿನ್ ಬಿಲ್ಡಿಂಗ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಬಯೋಟೆಕ್ನಾಲಜಿ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸೇರಿದಂತೆ 100ಕ್ಕೂ ಹೆಚ್ಚು ಘಟಕಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ. ಜತೆಗೆ ಹಣಕಾಸು ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದು ಅವರು ವಿವರಿಸಿದರು.
ನಗರದಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಸಣ್ಣ ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವುದರ ಜತೆಗೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಸಿಯಾ ಉಪಾಧ್ಯಕ್ಷರಾದ ನಿಂಗಣ್ಣ ಎಸ್. ಬೀರಾದರ್, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹುಸೇನ್, ನಗರ ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಗ್ರಾಮೀಣ ಜಂಟಿ ಕಾರ್ಯದರ್ಶಿ ದಿನೇಶಕುಮಾರ್.ವಿ., ಖಜಾಂಚಿ ಆರ್.ದೊರೈ, ಉಪಸಮಿತಿ ಅಧ್ಯಕ್ಷ ಸದಾಶಿವ ಆರ್.ಅಮೀನ್, ಸಹ ಅಧ್ಯಕ್ಷ ಆನಂದರಾವ್,ಕೆ, ಉಪಸಮಿತಿಯ ಸಲಹೆಗಾರರಾದ ಶ್ರೀಕಂಠದತ್ತ ಪಿ.ಎಸ್., ವಸಂತನರಸಾಪುರ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ಡಾ. ಸಿ.ವಿ. ಹರೀಶ್, ಎಂ. ಚಂದ್ರಶೇಖರ್, ಎಸ್. ಕಂಠಪ್ಪ, ಸುಜ್ಞಾನ ಹಿರೇಮಠ್, ತುಮಕೂರು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪಿ.ಆರ್. ಕುರಂದವಾಡ ಮತ್ತಿತರರು ಉಪಸ್ಥಿತರಿದ್ದರು.
– ಚಂದ್ರಚೂಡಿ ಕೆ.ಬಿ.
