ಬೆಂಗಳೂರು, ಜುಲೈ 21: ಕರ್ನಾಟಕದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯ ಪರಿಣಾಮವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಉತ್ತಮ ಮಟ್ಟದಲ್ಲಿದ್ದು, ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು ಸರಾಸರಿ AQI 45 ರಿಂದ 55ರ ನಡುವೆ ದಾಖಲಾಗಿದ್ದು, ಗಾಳಿಯಲ್ಲಿರುವ PM2.5 ಕಣಗಳ ಪ್ರಮಾಣವೂ ಸುರಕ್ಷಿತ ಮಟ್ಟವಾದ 6 ರಿಂದ 14 ಮೈಕ್ರೋಗ್ರಾಂ/ಕ್ಯೂಬಿಕ್ ಮೀಟರ್ ನಡುವೆ ಇದೆ. PM10 ಹಾಗೂ ಸಲ್ಫರ್ ಡೈಆಕ್ಸೈಡ್ ಮಟ್ಟಗಳೂ ಸುರಕ್ಷಿತ ಮಿತಿಯಲ್ಲೇ ದಾಖಲಾಗಿವೆ.
ನಗರದ ಜಯನಗರ, ಹೆಬ್ಬಾಳ ಹಾಗೂ ಬಿಟಿಎಂ ಲೇಔಟ್ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಅತ್ಯುತ್ತಮವಾಗಿದ್ದರೆ, ಸಿಟಿ ರೈಲ್ವೆ ನಿಲ್ದಾಣ ಮತ್ತು ಸಿಲ್ಕ್ ಬೋರ್ಡ್ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಿರುವ ಕಾರಣ AQI ಸ್ವಲ್ಪ ಏರಿಕೆಯಾದರೂ ‘ಸಾಧಾರಣ’ ಮಟ್ಟದಲ್ಲೇ ಇದೆ. ನಿರಂತರ ಮಳೆಯಿಂದ ವಾತಾವರಣದಲ್ಲಿದ್ದ ಧೂಳಿನ ಕಣಗಳು ನೆಲಕ್ಕೆ ಸೇರಿರುವುದರಿಂದ ಬೆಂಗಳೂರಿಗರು ಶುದ್ಧ ಗಾಳಿಯನ್ನು ಅನುಭವಿಸುತ್ತಿದ್ದಾರೆ.
ರಾಜ್ಯದ ಪ್ರಮುಖ ನಗರಗಳ ಇಂದಿನ AQI
- ಚಿಕ್ಕಮಗಳೂರು: 38 (ಉತ್ತಮ)
- ಬೆಳಗಾವಿ: 43 (ಉತ್ತಮ)
- ಉಡುಪಿ: 46 (ಉತ್ತಮ)
- ಮಂಗಳೂರು: 48 (ಉತ್ತಮ)
- ಗದಗ: 44 (ಉತ್ತಮ)
- ಕೊಪ್ಪಳ: 44 (ಉತ್ತಮ)
- ಬಳ್ಳಾರಿ: 50–65 (ಸಾಧಾರಣ)
- ಬಾಗಲಕೋಟೆ: 50–65 (ಸಾಧಾರಣ)
ತಜ್ಞರ ಪ್ರಕಾರ, ಪ್ರಸ್ತುತ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸುರಕ್ಷಿತ ಮಟ್ಟದಲ್ಲಿದ್ದು, ಸಾರ್ವಜನಿಕರು ಹಾಗೂ ವೃದ್ಧರು ಹೊರಾಂಗಣ ಚಟುವಟಿಕೆಗಳಲ್ಲಿ ನಿರಾಳವಾಗಿ ತೊಡಗಿಕೊಳ್ಳಬಹುದು. ಆದರೆ ಮಳೆಯ ವಾತಾವರಣ ಮತ್ತು ತಂಪಾದ ಗಾಳಿಯಿಂದ ಆಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುವವರು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
