ಚಾಮರಾಜನಗರ:- ಸಮಾಜದ ಸ್ವಾಸ್ಥ್ಯಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ವರ್ತಕರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರ ಕರ್ತರ ಸಂಘ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ಭಾನುವಾರದಂದು ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕೇಂದ್ರದಲ್ಲಿ ಪ್ರಾಮಾಣಿಕ ಪತ್ರಕರ್ತರು ಇದ್ದಾರೆ. ಯಾವುದೇ ತಾರತಮ್ಯಗಳನ್ನು ಮಾಡದೆ ಎಲ್ಲರನ್ನೂ ಸಮನಾಗಿ ಪ್ರೀತಿ ವಿಶ್ವಾಸದಿಂದ ಕಾರ್ಯ
ನಿರ್ವಹಿಸುತ್ತಿದ್ದು, ಪತ್ರಕರ್ತರು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟ ರಂಗಶೆಟ್ಟಿ ಅವರು ಪತ್ರಕರ್ತರ ಕ್ಷೇಮ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದರು.ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇ ಶ್ ಪ್ರಸಾದ್ ಮಾತನಾಡಿ, ಜಿಲ್ಲೆಯ ಅಭಿವೃ ದ್ಧಿಯಲ್ಲಿ ಜಿಲ್ಲೆಯ ಪತ್ರಕರ್ತರ ಪಾಲು ಹೆಚ್ಚಾಗಿದೆ. ಜಿಲ್ಲೆಯ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಗಳು ಹೆಚ್ಚಿನ ಮಟ್ಟದಲ್ಲಿ ಸಿಗುವಂತಾಗಬೇಕು ಎ೦ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ರಾಜ್ಯದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಅದನ್ನು ತಡೆದಿದ್ದರೆ ಸಮಾಜಕ್ಕೆ ಗಂಭೀರ ಸಮಸ್ಯೆ ಉಂಟಾಗುತ್ತದೆ.

ಇದು ನೈಜ ಪತ್ರಕರ್ತರ ಘನತೆಗೂ ಧಕ್ಕೆ ತರುತ್ತದೆ ಎಂದು ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್. ಸಿದ್ದಲಿಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, 2025-26ನೇ ಸಂಘದ ಚುನಾವಣೆಯಲ್ಲಿ ನಮ್ಮ ತಂಡ ಗೆದ್ದು ಬಂದ ಮೇಲೆ ಸಂಘದ ಸದಸ್ಯರ ಹಿತಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗಿದೆ. ಮೊದಲಿಗೆ ಸಂಘದ ಎಲ್ಲರ ಸದಸ್ಯರಿಗೂ ವಿಮೆ ಸೌಲಭ್ಯ, ಪತ್ರಕರ್ತರ ಕ್ಷೇಮನಿಧಿ, ದತಿ ಪ್ರಶಸ್ತಿ ನಿಧಿ ಸ್ಥಾಪನೆ, ಜಿಲ್ಲಾ ಪತ್ರಕರ್ತರ ಭವನ ನವೀಕರಣಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸದಸ್ಯರ ಅಗತ್ಯ ಕಾರ್ಯಕ್ರಮಗಳನ್ನು ಆದ್ಯತೆ ಮೇಲೆ ಮಾಡಲಾಗುತ್ತದೆ ಎಂದರು..
ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಯನ್ನು ಉದಯವಾಣಿ ಹಿರಿಯ ವರದಿಗಾರ ಕೆ.ಎಸ್. ಬನಶಂಕರ ಆರಾಧ್ಯ ಅವರಿಗೆ ಅಕಾಡೆಮಿ ಸದಸ್ಯರೂ ಆದ ಶಿವಾನಂದ ತಗಡೂರು ಅವರು ಅಕಾಡೆಮಿಯ ಪರವಾಗಿ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಶ್ರೀಮತಿ ಗೌರಮ್ಮ- ಬಿ.ರಾಚಯ್ಯ ದತ್ತಿ ಪ್ರಶಸ್ತಿಯನ್ನು ಸುದ್ದಿಸಂಜೆ ಪತ್ರಿಕೆಯ ವರದಿಗಾರ ಎಂ.ಬಸವರಾಜು ಅವರಿಗೆ, ಲಿಂಗಮ್ಮ ಮತ್ತು ಆರ್. ಸಿದ್ದೇಗೌಡ ದತ್ತಿ ಪ್ರಶಸ್ತಿಯನ್ನು ಹನೂರು ತಾಲ್ಲೂಕಿನ ಆಂದೋಲನ ಪತ್ರಿಕೆ ವರದಿಗಾರ ಎಂ.ಮಹಾದೇಶ ಅವರಿಗೆ, ಸಿದ್ದಲಿಂಗ ದೇವರು ಹಿರಿಯ ಛಾಯಾಗ್ರಾಹಕ ಪ್ರಶಸ್ತಿಯನ್ನು ಪತ್ರಿಕಾ ಛಾಯಾಗ್ರಾಹಕ ಬದನಗುಪ್ಪೆ ಮಲ್ಲಣ್ಣ ಅವರಿಗೆ ಮತ್ತು ಮಾಜಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ದತ್ತಿ ಪ್ರಶಸ್ತಿಯನ್ನು ಗುಂಡ್ಲುಪೇಟೆ ತಾಲ್ಲೂಕಿನ ವಿಜಯ ಕರ್ನಾಟಕ ಪತ್ರಿಕೆಯ ಬೇಗೂರು ವರದಿಗಾರ ಮಣಿಕಂಠ ಅವರಿಗೆ, ಲೇಖಕಿ ಎಚ್.ಕೆ.ವಿಜಯಾ ಅವರ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಆರ್.ಮ್ಯಾಕ್ಸ್ ನ್ಯೂಸ್ ವರದಿಗಾರ ಕೊಳ್ಳೇಗಾಲದ ಸಿ.ಬಸಂತ್ ಕುಮಾರ್ ಅವರಿಗೆ ಹಾಗೂ ಹೊನ್ನಹಳ್ಳಿ ಪಟೇಲ್ ಎಚ್.ಎಂ. ಪುಟ್ಟಮಾದಪ್ಪ ದತ್ತಿ ಪ್ರಶಸ್ತಿಯನ್ನು ಗೊರುಕನ ಪತ್ರಿಕೆಯ ಯಳಂದೂರು ತಾಲ್ಲೂಕು ವರದಿಗಾರ ವೈ.ಎಂ.ಭಾನುಪ್ರಕಾಶ್ ಅವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಶಿಧರ್, ಸಂಘದ ಜಿಲ್ಲಾ ಉಸ್ತುವಾರಿ ಸೋಮಶೇಖರ್ ಕೆರಗೋಡು, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ವರ್ತಕರ ಸಂಘದ ಅಧ್ಯಕ್ಷ ಎನ್.ಶಂಕರ್, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಶಶಿಧರ ಕಾಡುಕೊತ್ತನಹಳ್ಳಿ ಸೇರಿದಂತೆ ಇತರರಿದ್ದರು.
– ಶ್ರೀ ಸಾಯಿ ಎಸ್ ಮಂಜು
