ಬೆಂಗಳೂರು: ನಾಳೆ (ಮೇ 20) ನಡೆಸಲು ಕರೆ ನೀಡಲಾಗಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದ್ದು, ಸರ್ಕಾರ ಮತ್ತು ನೌಕರರ ನಡುವೆ ಸಂಧಾನ ಮಾತುಕತೆ ಮುಂದುವರಿಸಬೇಕು ಎಂದು ಮಹತ್ವದ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ. ಮನ್ಮಥರಾವ್ ಅವರಿದ್ದ ಪೀಠವು ಮುಷ್ಕರ ಮುಂದುವರಿಸದಂತೆ ಸಾರಿಗೆ ಸಂಘಟನೆಗಳಿಗೆ ನಿರ್ಬಂಧ ವಿಧಿಸಿದೆ.
ಸರ್ಕಾರ ಮತ್ತು ಸಾರಿಗೆ ಸಂಘಟನೆಗಳ ನಡುವೆ ಚರ್ಚೆ ನಡೆಯಲಿ, ಮುಷ್ಕರ ಕೈಬಿಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಕಾರ್ಮಿಕ ಆಯುಕ್ತರ ರಾಜಿ ಸಂಧಾನ ಪ್ರಕ್ರಿಯೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಈಗಿನ ಹಂತದಲ್ಲಿ ಮುಷ್ಕರ ಕಾನೂನುಬಾಹಿರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಷ್ಕರವನ್ನು ಪ್ರಶ್ನಿಸಿ ಕೆಲಸದ ಮಹಿಳೆ ಹಾಗೂ ಕಟ್ಟಡ ಕಾರ್ಮಿಕರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಈ ಮಧ್ಯೆ, ಸಾರಿಗೆ ಇಲಾಖೆ ನೌಕರರ ಬೇಡಿಕೆಗಳ ಕುರಿತು ನಡೆದ ಸಂಧಾನ ಸಭೆ ವಿಫಲವಾಗಿದ್ದು, ಮುಂದಿನ ವಿಚಾರಣೆಯನ್ನು ಮೇ 25ಕ್ಕೆ ನಿಗದಿಪಡಿಸಲಾಗಿದೆ. ಸರ್ಕಾರದೊಂದಿಗೆ ಸಿಎಂ ಮಟ್ಟದ ಸಭೆಗೆ ನೌಕರರು ಪಟ್ಟು ಹಿಡಿದಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಸಾರಿಗೆ ಮುಷ್ಕರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿರುವುದರಿಂದ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ತಾತ್ಕಾಲಿಕವಾಗಿ ನಿರಾಳತೆ ದೊರೆತಿದೆ.
