ಕೆ ಆರ್ ಪೇಟೆ: ಹಾಲು ಉತ್ಪಾದಕರು ಕಡ್ಡಾಯವಾಗಿ ವೈಯುಕ್ತಿಕವಾಗಿ ಹಾಗೂ ರಾಸುಗಳಿಗೆ ವಿಮೆಯನ್ನು ಮಾಡಿಸುವ ಮೂಲಕ ಮುಂದೆ ಆಗುವ ಆರ್ಥಿಕ ತೊಂದರೆಗಳಿಂದ ಹೊರಬಂದು ನೆಮ್ಮದಿಯ ಜೀವನ ನಡೆಸುವಂತೆ ಮನ್ಮುಲ್ ನಿರ್ದೇಶಕ ಡಾಲು ರವಿ ಕಿವಿಮಾತು ಹೇಳಿದರು.
ಅವರು ಪಟ್ಟಣದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಉಪ ಕಚೇರಿಯಲ್ಲಿ ಮರಣ ಹೊಂದಿದ ರಾಸುಗಳಿಗೆ ಒಕ್ಕೂಟದಿಂದ ನೀಡುವ ಅನುದಾನದ ಚೆಕ್,ರಾಸುಗಳ ಮಾಲಿಕರು ಆಕಸ್ಮಿಕವಾಗಿ ಮರಣ ಹೊಂದಿದವರಿಗೆ ಚೆಕ್,ಸಂಘದ ನೂತನ ಕಟ್ಟಡಕ್ಕೆ ಅನುದಾನದ ಚೆಕ್ ವಿತರಣೆ ಮಾಡಿ ಮಾತನಾಡಿದರು.

ಗ್ರಾಮದಲ್ಲಿ ಹಾಲಿನ ಡೇರಿಯ ಸುಂದರ ಕಟ್ಟಡ ನಿರ್ಮಾಣ ಮಾಡಿದರೆ ಸಾಕು ಎಂಬ ಭಾವನೆ ಇರುತ್ತದೆ. ಅದನ್ನು ಉಳಿಸುವ ಬೆಳೆಸುವ ಕರ್ತವ್ಯ ಪ್ರತಿಯೊಬ್ಬರ ಹಕ್ಕಾಗಿರುತ್ತದೆ.ಡೈರಿ ಗ್ರಾಮದ ಆಸ್ತಿ ಹಾಗೂ ಶಕ್ತಿಯಾಗಿದೆ. ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು. ಸಂಘದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಬೆರಸಬಾರದು.ಒಂದು ವೇಳೆ ರಾಜಕೀಯ ಬೆರಸಿದರೆ ಸಂಘವು ಹಾಳಾಗುವುದರಲ್ಲಿ ಸಂಶಯವಿಲ್ಲ. ದೇಶದಲ್ಲಿ ಹೈನುಗಾರಿಕೆಯು ಯಾವುದೇ ದೊಡ್ಡ ಉದ್ಯಮಕ್ಕೆ ಸರಿಸಮನಾಗಿ ನಿಲ್ಲುವ ಮೂಲಕ ದೇಶದ ಆರ್ಥಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ.ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಮುಖ್ಯ ಉಪ ಕಸುಬಾಗಿ ಮಾಡಿಕೊಂಡು ಅದರಲ್ಲೂ ಮಹಿಳೆಯರು ಯುವಕರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿರುವುದರಿಂದ ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ.ಅದ್ದರಿಂದ ಸಂಘವನ್ನು ಮುಂದಿನ ಪೀಳಿಗೆಗೆ ಉಳಿಸಲು ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕೆಂದು ಮನ್ಮುಲ್ ನಿರ್ದೇಶಕ ಡಾಲು ರವಿ ಸಲಹೆ ನೀಡಿದರು.

ಮನ್ಮುಲ್ ನಿರ್ದೇಶಕ ಎಂ ಬಿ ಹರೀಶ್ ಮಾತನಾಡಿ ಸಂಘದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಬೆರಸಬೇಡಿ.ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ವೈಯುಕ್ತಿಕವಾಗಿ ಹಾಗೂ ಸಂಘದ ಅಭಿವೃದ್ಧಿಯ ಕಡೆ ಗಮನ ಹರಿಸಿರಿ.ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಹಾಲು ಉತ್ಪಾದಕರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.ಮನ್ಮುಲ್ ವತಿಯಿಂದ ಹಾಲು ಉತ್ಪಾದಕರ ಮಕ್ಕಳು ಉನ್ನತ ವ್ಯಾಸಂಗ ಮಾಡಲು ಧನ ಸಹಾಯ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮನ್ಮುಲ್ ನಿರ್ದೇಶಕ ಎಂ ಬಿ ಹರೀಶ್, ಮನ್ಮುಲ್ ಉಪ ವ್ಯವಸ್ಥಾಪಕ ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿಗಳಾದ ಮಧು,ಸಂಧ್ಯಾ, ಜಗದೀಶ್, ಶಶಿಕುಮಾರ್, ನಾಗಪ್ಪ ಅಲ್ಲಿಬಾದಿ, ಭಾವನಾ,ಡಾ.ಪ್ರಜ್ವಲ್ ಸೇರಿದಂತೆ ಇತರರು ಹಾಜರಿದ್ದರು.
– ಶ್ರೀನಿವಾಸ್ ಆರ್.
