ಹಾಸನ : ವಿಶ್ವ ಸಾಹಿತ್ಯದ ದೈತ್ಯ, ದಿವ್ಯ, ಭವ್ಯ ಪ್ರತಿಭೆಯಾದ ಕುವೆಂಪು ಅವರು ಕನ್ನಡಿಗರ ಎದೆಯಲ್ಲಿ ಬಿತ್ತಿದ ‘ಕನ್ನಡ ಪ್ರಜ್ಞೆ’ಯು ವಿಶ್ವಮಾನವ ಪ್ರಜ್ಞೆಯ ಭಾಗವಾಗಿ, ಕುವೆಂಪು ಅವರ ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಚರಿತ್ರೆಯಲ್ಲಿ ದಟ್ಟವಾಗಿ ಮೂಡಿಬಂದಿದೆ. ಅವರ ಒಟ್ಟು ಸಾಹಿತ್ಯದಲ್ಲೇ ಕನ್ನಡಪ್ರಜ್ಞೆಯ ವಿರಾಟ್ ದರ್ಶನ ಲಭಿಸುತ್ತದೆ. ಕನ್ನಡ ಬದುಕಿನ ಅನಾವರಣ, ಪ್ರಕೃತಿಯ ವರ್ಣನೆ, ಭಾಷೆಯ ಸಾರಸತ್ವ, ಜನಜೀವನದ ದರ್ಶನದಲ್ಲಿ ಕನ್ನಡ ಪ್ರಜ್ಞೆಯ ಕೇಂದ್ರಿತ ನೆಲೆಗಳಿವೆ. ಈ ನೆಲೆಗಳು ನಮ್ಮ ಭಾಷೆ ಮತ್ತು ಸಂಸ್ಕೃತಿಯ ಮೂಲಕ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುತ್ತವೆ ಎಂದು ಪ್ರಸಿದ್ಧ ಸಾಹಿತಿ ಹಾಗೂ ಮೈಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.

ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ಹಾಗೂ ಟೈಮ್ಸ್ ಪಿ.ಯು.ಕಾಲೇಜು ಹಾಸನ ವತಿಯಿಂದ ನಗರದ ಸತ್ಯಮಂಗಲದಲ್ಲಿರುವ ಟೈಮ್ಸ್ ಗುರುಕುಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಕುವೆಂಪು ಮತ್ತು ಕನ್ನಡ ಪ್ರಜ್ಞೆ” ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಮಾತನಾಡಿ ಕುವೆಂಪು ಅವರಿಗೆ ಕನ್ನಡವೇ ಧರ್ಮ ಮತ್ತು ಕರ್ಮ ಎರಡೂ ಆಗಿತ್ತು. ನಮ್ಮ ಸಮಾಜವನ್ನು ‘ಕನ್ನಡ ಸಮಾಜ’ ಎಂದು ಕರೆದು ಅದರ ಹುಳುಕುಗಳನ್ನು ವಿಮರ್ಶಿಸಿ, ಅದಕ್ಕೆ ತಮ್ಮ ಬರಹ ಮತ್ತು ಭಾಷಣದ ಮೂಲಕ ಚಿಕಿತ್ಸೆ ಕೊಟ್ಟರು. ಕನ್ನಡ ಭಾಷೆಯ ಹಾಗೂ ಕನ್ನಡ ಸಾಹಿತ್ಯದ ಮೂಲಕ ಕರ್ನಾಟಕ ಸಂಸ್ಕೃತಿಯ ಸಮಾಜದ ವಿಕಾಸಕ್ಕೆ ಶ್ರಮಿಸಿದರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ, ಕರ್ನಾಟಕ ಮತ್ತು ಕನ್ನಡಿಗನಿಗೆ ಸಂಬಂಧಿಸಿದ ಕುವೆಂಪು ಅವರ ಪರಿಕಲ್ಪನೆ ಮತ್ತು ಚಿಂತನೆಗಳು ಗಮನಾರ್ಹವಾದವು, ಮನನೀಯವಾದವು. ಅನುಷ್ಠಾನ ಯೋಗ್ಯವಾದವು. ಇವು ಕನ್ನಡ ಜನಸಮುದಾಯದಲ್ಲಿ ಕನ್ನಡ ಪ್ರಜ್ಞೆಯನ್ನು ವಿಸ್ತರಿಸಿದವು. ಕನ್ನಡದಲ್ಲಿ ಕುವೆಂಪು ಸಾಹಿತ್ಯ ಕೃಷಿ ಆರಂಭಿಸಿದ ಮೇಲೆ ನಾಡಿನ ಉದ್ದಗಲ ಕನ್ನಡಮಯವಾಯಿತು. ಎಲ್ಲೆಡೆ ಕನ್ನಡ ಡಿಂಡಿಮದ ನಿನಾದ ಅನುರಣಿಸಿತು. ಕನ್ನಡದಲ್ಲಿ ಕುವೆಂಪು ಅವರಷ್ಟು ಯಾವ ಕವಿಯೂ ಕನ್ನಡ, ಕನ್ನಡಿಗ, ಕರ್ನಾಟಕವನ್ನು ಕುರಿತು ಕವಿತೆಯನ್ನು ಬರೆದಿಲ್ಲ. ಅವರ ಈ ಕನ್ನಡ ಕವನಗಳು ನಾಡಿನ ಜನಮನವ ಬಡಿದೆಚ್ಚರಿಸಿವೆ. ಅವರಲ್ಲಿ ಕನ್ನಡಾಭಿಮಾನವನ್ನೂ ಪ್ರೀತಿಯನ್ನೂ ತುಂಬಿವೆ. ಹಲವು ಹೋರಾಟಗಾರರಿಗೆ ಪ್ರೇರಣೆ ನೀಡಿವೆ. ಕ್ರಾಂತಿಯ ಹಾಡುಗಳಾಗಿ ಎಲ್ಲೆಡೆ ಮೊಳುಗಿರುವೆ.

ಕನ್ನಡ ಚಳವಳಿಗೆ ಶಕ್ತಿ ತುಂಬಿರುವುದು ವಿಶೇಷ. ಮಕ್ಕಳಲ್ಲಿ ಸೃಜನಶೀಲತೆ ಅರಳಲು ಮಾತೃಭಾಷೆಯಾದ ಕನ್ನಡ ಭಾಷೆಯು ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಮಕ್ಕಳ ಆರಂಭದ ಕಲಿಕೆಯ ದಿನಗಳಲ್ಲಿ ಇಂಗ್ಲೀಷನ್ನು ತುರುಕಬಾರದು. ಅವರ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ನಡೆಯಬೇಕು. ಜಗತ್ತಿನ ಜ್ಞಾನವಿಲ್ಲ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಸಿಗುವಂತಾಗಬೇಕು ಎಂದು ಬಯಸಿದರು ಕನ್ನಡಕ್ಕೆ ತ್ರಾಶ ಸೂತ್ರ ಅಪಾಯಕಾರಿ ಇದರಿಂದ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಎದುರಾಗುತ್ತದೆ ಎಂದು ದುಬಾಶ ಸೂತ್ರವನ್ನು ಅವರು ಸೂಚಿಸಿದರು ಪಠ್ಯಪುಸ್ತಕಗಳು ಕೂಡ ಕನ್ನಡದಲ್ಲಿ ಸಿದ್ದವಾಗಬೇಕು ಆ ಮೂಲಕ ಮಕ್ಕಳು ಕನ್ನಡವನ್ನು ಯಾವುದೇ ಆಯಾಸವಿಲ್ಲದ ಕಲಿಯಬೇಕು ಎಂದು ಬಯಸಿದರು. ಕುವೆಂಪು ಅವರು ಕುಲಪತಿಗಳಾಗಿ ಅಧ್ಯಾಪನ ಮತ್ತು ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನ ಮಾಡುವ ಮೂಲಕ ತಮ್ಮ ಕನ್ನಡದ ಬದ್ಧತೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ ಕನ್ನಡ ಪ್ರಜ್ಞೆ ಎನ್ನುವುದು ಕುವೆಂಪುರವರ ಅಂತರ್ಮುಖಿ ಮತ್ತು ಬಹಿರ್ಮುಖಿ ಎರಡೂ ದಿಸೆಗಳಲ್ಲೂ ಹಾಸುಹೊಕ್ಕಾಗಿತ್ತು. ಕುವೆಂಪು ಯಾವುದೇ ಜಾತಿ, ಧರ್ಮ, ಪಂಗಡಕ್ಕೆ ಅಂಟಿಕೊಳ್ಳಲಿಲ್ಲ. ಅವರು ಬರೆದಂತೆ ನಡೆದವರು, ನಡೆದಂತೆ ಬರೆದವರು. ಒಮ್ಮೆ ಕರ್ನಾಟಕ ರಾಜ್ಯದ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರುಗಳು ಕುವೆಂಪು ಮನೆಗೆ ಹೋಗಿ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರಾಗಬೇಕೆಂದು ಒತ್ತಾಯಿಸುತ್ತಾರೆ. ಕುವೆಂಪು ನನ್ನ ಮನೆ ಜಗತ್ತು, ನನ್ನ ಕುಟುಂಬ ವಿಶ್ವ. ನನ್ನ ಧರ್ಮ ಮಾನವ ಧರ್ಮ. ನನ್ನನ್ನೇಕೆ ವಿಶ್ವದ ಒಂದು ಚಿಕ್ಕ ಭಾಗವಾದ ಭಾರತ, ಅದರ ಸಣ್ಣ ಭಾಗವಾದ ಕರ್ನಾಟಕಕ್ಕೆ ಸೀಮಿತಗೊಳಿಸುತ್ತೀರಿ ಎಂದು ಬುದ್ದಿ ಹೇಳಿ ಕಳಿಸುತ್ತಾರೆ. ಇದರ ಹಿಂದೆ ಅವರಿಗಿದ್ದ ವಿಶ್ವ ಮಾನವೀಯ ಮೌಲ್ಯಗಳ ತತ್ವಸಿದ್ಧಾಂತಗಳನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕಿದೆ. ಕುವೆಂಪು ಕನ್ನಡ ನಾಡು ನುಡಿಗಾಗಿ ಬದುಕಿ ಬಾಳಿದವರು. ಕರ್ನಾಟಕದಲ್ಲಿ ಡಾ. ರಾಜ್ಕುಮಾರ್ ಹಾಗು ಕುವೆಂಪುರವರು ಕನ್ನಡ ನಾಡು ನುಡಿಗಾಗಿ ಅವಿಶ್ರಾಂತವಾಗಿ ದುಡಿದ ಮಹಾನ್ ಅಜಾತಶತೃಗಳು. ಇವರಿಂದ ನಾವುಗಳೆಲ್ಲಾರೂ ಕನ್ನಡ ಪ್ರಜ್ಞೆಯನ್ನು ಬೆಳಿಸಿಕೊಳ್ಳಬೇಕಿದೆ ಎಂದರು.

ಟೈಮ್ಸ್ ಗುರುಕುಲ & ಟೈಮ್ಸ್ ಪಿ.ಯು.ಕಾಲೇಜಿನ ಅಧ್ಯಕ್ಷರಾದ ಎ.ಬಿ.ಸುರೇಂದ್ರ ಕುಮಾರ್ ಕಾಯ್ಕçಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ನಾಡು ನುಡಿಗೆ ಕುವೆಂಪು ಕೊಟ್ಟ ಕೊಡುಗೆ ಅಪಾರವಾದುದು. ಕರ್ನಾಟಕ ಚಾರಿತ್ರಿಕ ನಾಡಗೀತೆಯನ್ನು ಅದ್ಭುತವಾಗಿ ಬರೆದು ನಮಗೆ ನೀಡಿದ್ದಾರೆ. ನಾವು ಎಷ್ಟೇ ಭಾಷೆಗಳನ್ನು ಕಲಿತರೂ ಕನ್ನಡ ನಮ್ಮ ತಾಯಿ ಭಾಷೆ. ಅದಕ್ಕೆ ತನ್ನದೇಯಾದ ಮಹತ್ವ ಹಾಗೂ ಪೂಜ್ಯನೀಯ ಗೌರವ ಸ್ಥಾನವಿದೆ. ನಮ್ಮ ನಾಡುನುಡಿ, ಕವಿ ಸಾಹಿತಿಗಳ ಬದುಕನ್ನು ನಮ್ಮ ಮಕ್ಕಳು ಅರ್ಥ ಮಾಡಿಕೊಳ್ಳಬೇಕಿದೆ. ಇಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬಹಳ ಮೌಲ್ಯಯುತ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ನಮ್ಮ ಮಕ್ಕಳಿಗೆ ವರದಾನವಾಗಿ ಪರಿಣಮಿಸಿದೆ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಆಶಯ ನುಡಿಗಳನ್ನಾಡಿ ಕುವೆಂಪು ಮತ್ತು ಕನ್ನಡ ಪ್ರಜ್ಞೆ ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಕುವೆಂಪುರವರು ಪ್ರತಿಪಾದಿಸಿರುವ ವಿಶ್ವ ಮಾನವ ಸಂದೇಶ ಸಾರುವ ಪಂಚ ಮಂತ್ರಗಳು ಮಾನವ ಕುಲಕ್ಕೆ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯ ಬದುಕನ್ನು ಕಟ್ಟಿಕೊಡುತ್ತವೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಠಿ ವಿಶ್ವಮಾನವ ಸಂದೇಶ ಸಾರುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಆ ಕಾರಣದಿಂದಲೇ ಕುವೆಂಪುರವರನ್ನು ಜಗದಕವಿ, ಯುಗದ ಕವಿ ಎಂದು ಕರೆಯಲಾಗಿದೆ. ಕುವೆಂಪು ಒಬ್ಬ ದಾರ್ಶನಿಕ ಕವಿ. ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣ್ಕೆಯನ್ನೂ, ವೈಚಾರಿಕತರಯನ್ನು ಬಿತ್ತಿದ ಮಹಾಚೇತನ ಕುವೆಂಪು ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಗೊರೂರು ಅನಂತರಾಜು, ಕದಂಬ ಸೇನೆಯ ಜಿಲ್ಲಾಧ್ಯಕ್ಷ ಎ.ಎಚ್.ಗಣೇಶ್, ಎ.ವಿ.ಕೆ. ಕಾಲೇಜಿನ ಉಪನ್ಯಾಸಕ ಪ್ರಕಾಶ್, ಮೈಸೂರಿನ ಅದಮ್ಯ ರಂಗ ಶಾಲೆಯ ಸ್ಥಾಪಕ ಹಾಗೂ ರಂಗಕರ್ಮಿ ಚಂದ್ರು ಮಂಡ್ಯ, ಕವಯಿತ್ರಿಯರಾದ ಗಿರಿಜಾ ನಿರ್ವಾಣಿ, ಮಂಜುಳಾ ಪ್ರಸಾದ್, ಪದ್ಮಾವತಿ ವೆಂಕಟೇಶ್, ಪ್ರಭಾಮಣಿ, ಪ್ರಾಂಶುಪಾಲರಾದ ಶೈಲರಾಯ್, ಉಪನ್ಯಾಸಕ ಪ್ರಮೋದ್, ಕನ್ನಡ ಉಪನ್ಯಾಸಕ ಅರವಿಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
