ಬೆಂಗಳೂರು: ದೇಶದ ಪ್ರತಿಷ್ಠಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಬ್ಬ ಮನೋತ್ಸವದ ಮೂರನೇ ಆವೃತ್ತಿಯು ಇದೇ ವರ್ಷದ ಡಿಸೆಂಬರ್ 5 ಮತ್ತು 6 ರಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿರುವ ಈ ವಿಶಿಷ್ಟ ಕಾರ್ಯಕ್ರಮಕ್ಕಾಗಿ ಪ್ರಸ್ತುತ ಕಾರ್ಯಕ್ರಮ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.

ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (ಎನ್ಸಿಬಿಎಸ್) ಜಂಟಿಯಾಗಿ ಮಾನಸಿಕ ಆರೋಗ್ಯ ಉತ್ತೇಜಿಸುವ ಉದ್ದೇಶದಿಂದ ಈ ಬೃಹತ್ ಹಬ್ಬವನ್ನು ಆಯೋಜಿಸುತ್ತಿವೆ.

ಕಳೆದ 2025ರ ನವೆಂಬರ್ ನಲ್ಲಿ ನಡೆದ ‘ಮನೋತ್ಸವ’ದ ಎರಡನೇ ಆವೃತ್ತಿಯು ಅಭೂತಪೂರ್ವ ಯಶಸ್ಸು ಕಂಡಿತ್ತು. ತಜ್ಞರ ನೇತೃತ್ವದ ಚರ್ಚಾಗೋಷ್ಠಿಗಳು, ಮುಖ್ಯ ಭಾಷಣಗಳು, ಅನುಭವ ಹಂಚಿಕೊಳ್ಳುವ ವಲಯಗಳು, ಸಂವಾದಾತ್ಮಕ ಕಾರ್ಯಾಗಾರಗಳು, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಸಮುದಾಯ ಮಳಿಗೆಗಳು ಸೇರಿದಂತೆ ಒಟ್ಟು 80ಕ್ಕೂ ಹೆಚ್ಚು ಗೋಷ್ಠಿಗಳಲ್ಲಿ 6,000ಕ್ಕೂ ಅಧಿಕ ಜನ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಇದೀಗ ಮನೋತ್ಸವ 2026ರ ಕಾರ್ಯಕ್ರಮಗಳ ರೂಪುರೇಷೆಗಾಗಿ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಇದು ಕಲಾಕಾರರು, ಸಂಶೋಧಕರು, ವೈದ್ಯಕೀಯ ವೃತ್ತಿಪರರು, ಆರೈಕೆದಾರರು, ಮಾನಸಿಕ ಆರೋಗ್ಯದ ಏರುಪೇರುಗಳನ್ನು ಖುದ್ದಾಗಿ ಎದುರಿಸಿದವರು ಮತ್ತು ಬದಲಾವಣೆಯ ಹರಿಕಾರರು ಒಟ್ಟಾಗಿ ರೂಪಿಸುವ ಒಂದು ಮುಕ್ತ ವೇದಿಕೆಯಾಗಿದೆ. ಸಂಶೋಧನೆ, ವೈಯಕ್ತಿಕ ಜೀವನದ ಅನುಭವಗಳು, ಕಲೆ ಹಾಗೂ ಸಮುದಾಯದ ಜ್ಞಾನವನ್ನು ಒಂದೇ ಸೂರಿನಡಿ ತರುವುದು, ಮಾನಸಿಕ ಆರೋಗ್ಯದ ಕುರಿತು ಮುಕ್ತ ಸಂವಾದಕ್ಕೆ ಸುಲಭವಾದ ವೇದಿಕೆಗಳನ್ನು ನಿರ್ಮಿಸುವುದು ಮತ್ತು ಜನರು ಆರೈಕೆ ಹಾಗೂ ಬೆಂಬಲ ನೀಡುವ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಲು ನೆರವಾಗುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ.
ಸ್ಥಳೀಯರ ಪಾಲ್ಗೊಳ್ಳುವಿಕೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಗಾಢವಾಗಿಸಲು, ಈ ವರ್ಷದ ಆವೃತ್ತಿಯು ಸುಲಭ ಪ್ರವೇಶಕ್ಕೆ ಮತ್ತು ಸಮುದಾಯದ ಧ್ವನಿಗಳಿಗೆ ಹೆಚ್ಚಿನ ಒತ್ತು ನೀಡಿದೆ. ಜೊತೆಗೆ ಕನ್ನಡದಲ್ಲಿ ಕಾರ್ಯಕ್ರಮ ಪ್ರಸ್ತಾವನೆಗಳನ್ನು ಸಲ್ಲಿಸಲು ವಿಶೇಷ ಪ್ರೋತ್ಸಾಹ ನೀಡಲಾಗಿದೆ. ಮಾನಸಿಕ ಆರೋಗ್ಯ ಮತ್ತು ಅದರ ವಿವಿಧ ಆಯಾಮಗಳ ಕುರಿತು ಕೆಲಸ ಮಾಡುತ್ತಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಸಂವಾದ, ಸಾರ್ವಜನಿಕ ಪಾಲ್ಗೊಳ್ಳುವಿಕೆ, ಚಿಂತನೆ ಹಾಗೂ ತಿಳುವಳಿಕೆಯನ್ನು ಉತ್ತೇಜಿಸುವ ಯಾವುದೇ ರೂಪದ ಕಾರ್ಯಕ್ರಮ ಪ್ರಸ್ತಾವನೆಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದೆ.

ಪ್ರಸ್ತಾವನೆಗಳನ್ನು ಅಧಿಕೃತ ಅರ್ಜಿ ನಮೂನೆಯ ಮೂಲಕ ಮಾತ್ರ ಸ್ವೀಕರಿಸಲಾಗುವುದು. ಹಬ್ಬದ ಆಯೋಜಕ ತಂಡದ ಸದಸ್ಯರಿಗೆ ನೇರವಾಗಿ ಇಮೇಲ್ ಕಳುಹಿಸುವುದು ಸೇರಿದಂತೆ ಯಾವುದೇ ಇತರ ಮಾಧ್ಯಮಗಳ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು ಸಲ್ಲಿಸಲು 2026ರ ಮೇ 31 ಕೊನೆಯ ದಿನಾಂಕವಾಗಿದೆ.
ಮಾಹಿತಿಗಳು ಮತ್ತು ಪ್ರಸ್ತಾವನೆ ಸಲ್ಲಿಕೆಯ ಮಾರ್ಗಸೂಚಿಗಳು ಸೇರಿದಂತೆ ಹೆಚ್ಚಿನ ವಿವರಗಳು ಮನೋತ್ಸವದ ಅಧಿಕೃತ ವೆಬ್ ಸೈಟ್ www.nationalmentalhealthfestival.com/ ನಲ್ಲಿ ಲಭ್ಯವಿವೆ.
