ರಾಮನಾಥಪುರ, ಮೇ 19 (RNP): ದೇಶ–ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ವ್ಯಾಪ್ತಿಯ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಮೇ 20 ರಿಂದ ಮೇ 24 ರವರೆಗೆ 23ನೇ ವಾರ್ಷಿಕ ಸಂಗೀತೋತ್ಸವ ಭವ್ಯವಾಗಿ ನಡೆಯಲಿದೆ.
ವಿದ್ವಾನ್ ಅರ್.ಕೆ. ಪದ್ಮನಾಭ ಅವರ ಸಾನಿಧ್ಯದಲ್ಲಿ ನಡೆಯಲಿರುವ ಈ 5 ದಿನಗಳ ಸಂಗೀತೋತ್ಸವಕ್ಕಾಗಿ ವೇದಿಕೆ ನಿರ್ಮಾಣ, ದಾಸೋಹ ವ್ಯವಸ್ಥೆ, ವಾಹನ ನಿಲುಗಡೆ ಹಾಗೂ ಬೆಂಗಳೂರಿನಿಂದ ಆಗಮಿಸುವ ನೂರಾರು ಕಲಾವಿದರಿಗೆ ವಸತಿ ಸೌಲಭ್ಯ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳ ಸಿದ್ಧತೆ ಭರದಿಂದ ಸಾಗುತ್ತಿದೆ.

ಕಾರ್ಯಕ್ರಮವು ರುದ್ರಪಟ್ಟಣದ ರಾಮಮಂದಿರದಲ್ಲಿ ನಡೆಯಲಿದ್ದು, ಮೇ 20 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಉದ್ಘಾಟನೆಯ ನಂತರ ರಶ್ಮಿ ಹರಿಪ್ರಸಾದ್ ಅವರ ಭರತನಾಟ್ಯ, ಮಾ. ಬಿ.ಕೆ. ಅತ್ರಿಕೌಶಿಕ್ ಅವರಿಂದ ತ್ಯಾಗರಾಜರ ಪ್ರಹ್ಲಾದ ವಿಜಯ ಗೇಯ ನಾಟಕ ಕುರಿತ ಪ್ರವಚನ ನಡೆಯಲಿದೆ. ದಿನಪೂರ್ತಿ ಯುವ ಪ್ರತಿಭೆಗಳ ಸಂಗೀತ, ವಾದ್ಯ ಮತ್ತು ನೃತ್ಯ ಪ್ರದರ್ಶನಗಳು ನಡೆಯಲಿವೆ. ಸಂಜೆ ವಿದ್ವಾನ್ ಜಿ. ಯೋಗವಂದನ ಅವರ ವೀಣಾವಾದನ ಸೇರಿದಂತೆ ವಿವಿಧ ಶಾಸ್ತ್ರೀಯ ಕಾರ್ಯಕ್ರಮಗಳು ಸಂಗೀತಾಸಕ್ತರನ್ನು ಆಕರ್ಷಿಸಲಿವೆ.

ಮೇ 21 ರಿಂದ 23 ರವರೆಗೆ ವಿದ್ವಾಂಸರ ಶಾಸ್ತ್ರೀಯ ಗಾಯನ, ಪಿಟೀಲು ತ್ರಯ, ಯುಗಳ ಗಾಯನ, ವಿಶೇಷ ಸಂದರ್ಶನಗಳು, ಹಾಸ್ಯ ಸಿಂಚನ ಹಾಗೂ ಸಭಾ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮ ದಿನವಾದ ಮೇ 24 ರಂದು ರಥೋತ್ಸವ, ನಾಮಸಂಕೀರ್ತನೆ ಹಾಗೂ ಮೈಸೂರು ಎಂ. ಮಂಜುನಾಥ್ ಮತ್ತು ಕು. ಮಾಳವಿ ಮಂಜುನಾಥ್ ಅವರಿಂದ ಪಿಟೀಲು ಯುಗಳ ಪ್ರದರ್ಶನ ನಡೆಯಲಿದೆ.

ಈ ಉತ್ಸವದ ಅಂಗವಾಗಿ ಸಂಗೀತ ಕಲಾರತ್ನ ಪ್ರಶಸ್ತಿ ಹಾಗೂ ಲಯಕಲಾ ಸ್ಪರ್ಶಮಣಿ ಬಿರುದು ಪ್ರದಾನ ಕಾರ್ಯಕ್ರಮವೂ ನಡೆಯಲಿದೆ.

ಸಂಗೀತೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿದ್ವಾನ್ ಅರ್.ಕೆ. ಪದ್ಮನಾಭ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
– ಕುಮಾರಸ್ವಾಮಿ ಎಂ.ಎನ್.
