ಹಾಸನ, ಮೇ 20: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆಯಬೇಕಾದರೆ ತಾಳ್ಮೆ, ಪರಿಶ್ರಮ ಹಾಗೂ ಸರಿಯಾದ ಯೋಜನೆಗಳು ಅಗತ್ಯವೆಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಬಸವೇಶ್ವರ ದೇವಾಲಯ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಸಂಘ ವತಿಯಿಂದ ಆಯೋಜಿಸಿದ್ದ “ವೀರಶೈವ ಲಿಂಗಾಯತ ಬ್ಯುಸಿನೆಸ್ ಎಕ್ಸ ಪೋ–2026” ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯಶಸ್ವಿ ಉದ್ಯಮಿಯಾಗಲು ಬೇಕಾದ ಜ್ಞಾನ ಮತ್ತು ಶಕ್ತಿ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ಕೆಲವರು ವ್ಯಾಪಾರದಲ್ಲಿ ಪ್ರಗತಿ ಸಾಧಿಸಿ ಶ್ರೀಮಂತರಾಗುತ್ತಾರೆ, ಇನ್ನೂ ಕೆಲವರು ನಷ್ಟದಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಯಾವುದೇ ಹೊಸ ಯೋಜನೆ ಕೈಗೊಳ್ಳುವ ಮೊದಲು ಪೂರ್ವ ತಯಾರಿ ಅಗತ್ಯವಿದೆ ಎಂದು ಸಲಹೆ ನೀಡಿದರು.
ವ್ಯಾಪಾರದಲ್ಲಿ ನಿರಂತರ ನಷ್ಟವಾಗುತ್ತಿದ್ದರೆ ಆಗುತ್ತಿರುವ ತಪ್ಪುಗಳನ್ನು ಅರಿತು ಸರಿಪಡಿಸಿಕೊಳ್ಳಬೇಕು. ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಇದ್ದರೂ ಸಮರ್ಪಕ ಚಟುವಟಿಕೆಗಳು ನಡೆಯುತ್ತಿಲ್ಲ. ಮಹಾಸಭಾದ ಪದಾಧಿಕಾರಿಗಳು ನಿಗಮವನ್ನು ನಿದ್ರೆಯಿಂದ ಎಬ್ಬಿಸಿ ಸಮಾಜದ ಬಡವರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಪ್ರಗತಿಗೆ ಸಹಕರಿಸಬೇಕು ಎಂದು ಹೇಳಿದರು.

ಚಿತ್ರನಟ ದೊಡ್ಡಣ್ಣ ಮಾತನಾಡಿ, “ನಾವು ನಮಗೋಸ್ಕರ ಬದುಕಬೇಕು ಹೊರತು ಇನ್ನೊಬ್ಬರಿಗಾಗಿ ಅಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆ ಬರುವವರೆಗೆ ಸಮಾಜದ ಉದ್ಧಾರ ಸಾಧ್ಯವಿಲ್ಲ” ಎಂದರು. ಬಸವಣ್ಣ ಅವರು ಯಾವತ್ತಿಗೂ ಜಾತಿಯತೆ ಮಾಡಿಲ್ಲ. ಆದ್ದರಿಂದ ಜಾತಿ-ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡದೆ ಎಲ್ಲರೂ ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇಂದಿನ ಯುವಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆ ಹೆಚ್ಚಾದ ಬಳಿಕ ಜೀವನಶೈಲಿ ಸಾಕಷ್ಟು ಬದಲಾಗಿದೆ. ಸಾಮಾಜಿಕ ಜಾಲತಾಣಗಳು ಯೋಚನಾ ವ್ಯಾಪ್ತಿಯನ್ನು ಸೀಮಿತಗೊಳಿಸುತ್ತಿವೆ. ಆದ್ದರಿಂದ ಯುವಕರು ಎಚ್ಚರಿಕೆಯಿಂದಿದ್ದು ಸ್ವಾವಲಂಬಿ ಬದುಕಿಗೆ ಬೇಕಾದ ಕೌಶಲಗಳನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಲಿಂಗಾಯತ ಸಮಾಜದ ಉದ್ಯಮಿಗಳನ್ನು ಒಂದೆಡೆ ಸೇರಿಸಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಎಕ್ಸ ಪೋಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಯಬೇಕು ಎಂದರು.

ವೀರಶೈವ ಲಿಂಗಾಯತ ಎಕ್ಸ ಪೋ ಅಂಗವಾಗಿ ವಿವಿಧ ಮಳಿಗೆಗಳನ್ನು ತೆರೆಯಲಾಗಿದ್ದು, ಶ್ರೀ ಸೋಮಶೇಖರ ಸ್ವಾಮೀಜಿ ಉದ್ಘಾಟಿಸಿದರು. ಪತ್ರಕರ್ತ ಬಿ.ಆರ್. ಉದಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ವೀರಶೈವ ಲಿಂಗಾಯತ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ, ಎಂಟಿಇಎಸ್ ಅಧ್ಯಕ್ಷ ಬಿ.ಆರ್. ಗುರುದೇವ್, ಮುಖಂಡರಾದ ಸಂಗಂ, ಮುಕ್ತಾಂಬ, ಗ್ರಾನೈಟ್ ರಾಜಶೇಖರ್, ಕಟ್ಟಾಯ ಶಿವಕುಮಾರ್, ಮಮತಾ ಪಾಟೀಲ್, ಮನುಕುಮಾರ್, ವಿಕಾಸ್ ಅಶೋಕ್ ಕುಮಾರ್, ಗೀರಿಜಾಂಭಿಕೆ, ಧನಲಕ್ಷ್ಮೀ, ಶೋಭಾ ಚಂದ್ರಶೇಖರ್, ವೀಣಾ ದೇವರಾಜ್, ಭಾಮಿನಿ ಹೇಮಂತ್, ಶೈಲಾ ಮದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶಿವಕುಮಾರ್ ಕಟ್ಟಾಯ
