ರಾಮನಾಥಪುರ, ಮೇ 20: ಸಂಗೀತ ಗ್ರಾಮವೆಂದೇ ಖ್ಯಾತಿ ಪಡೆದಿರುವ ರುದ್ರಪಟ್ಟಣದಲ್ಲಿ ನಡೆಯುತ್ತಿರುವ 23ನೇ ವಾರ್ಷಿಕ ಸಂಗೀತೋತ್ಸವಕ್ಕೆ ಬುಧವಾರ ಭಕ್ತಿ ಹಾಗೂ ಸಂಗೀತದ ಸೊಬಗಿನ ನಡುವೆ ಅದ್ದೂರಿ ಚಾಲನೆ ದೊರೆಯಿತು.
ರುದ್ರಪಟ್ಟಣದ ಶ್ರೀರಾಮ ಮಂದಿರದಲ್ಲಿ “ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್” ವತಿಯಿಂದ ಆಯೋಜಿಸಲಾದ ಪ್ರಥಮ ದಿನದ ಸಂಜೆ ಕಾರ್ಯಕ್ರಮದಲ್ಲಿ ಐವರು ಮಹಿಳಾ ಕಲಾವಿದರು ಅಮೋಘ ಸಂಗೀತ ಕಚೇರಿ ನಡೆಸಿಕೊಟ್ಟು ಶ್ರೋತೃಗಳ ಮನಗೆದ್ದರು.

ಪ್ರಥಮ ದಿನದ ಸಂಜೆ 8ನೇ ಕಚೇರಿ ವಿದ್ವಾನ್ ಡಾ. ಆರ್.ಕೆ. ಪದ್ಮನಾಭ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ವಿದುಷಿ ಜೆ. ಯೋಗವಂದನ ವೀಣೆ ವಾದನ, ವಿ. ಅದಿತಿ ಕೃಷ್ಣಪ್ರಸಾದ್ ಅವರ ಪಿಟೀಲ್, ವಿ. ಸ್ಮಿತಾ ಶ್ರೀಕಿರಣ್ ಅವರ ಕೊಳಲು, ವಿ. ದೀಪಿಕಾ ಶ್ರೀನಿವಾಸನ್ ಅವರ ಮೃದಂಗ ಹಾಗೂ ವಿ. ಭಾಗ್ಯಲಕ್ಷ್ಮೀಕೃಷ್ಣ ಅವರ ಮೋರ್ಚಿಂಗ್ ವಾದನ ಸಂಗೀತಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಾನಕಲಾಭೂಷಣ ಡಾ. ವಿದ್ವಾನ್ ಆರ್.ಕೆ. ಪದ್ಮನಾಭ ಅವರು, “ಜೀವನಕ್ಕೆ ಹದ ತಂದು ಮುದ ನೀಡುವ ಸಂಗೀತಕಲೆ ಎಂದಿಗೂ ಸೆಲೆಬತ್ತದೆ ಜೀವಂತವಾಗಿರಲು ನಿರಂತರ ಸಂಗೀತಾರಾಧನೆ ನಡೆಯಬೇಕು. ಅದಕ್ಕೆ ಶ್ರೋತೃಗಳು, ಬಂಧುಗಳು ಮತ್ತು ಮಿತ್ರರ ಹೃದಯ ವೈಶಾಲ್ಯವೇ ಪ್ರಮುಖ ಕಾರಣ” ಎಂದು ಅಭಿಪ್ರಾಯಪಟ್ಟರು.
ಮೈಸೂರು ಆರ್.ಸಿ. ರಮಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಆಸ್ವಾದಿಸಿದರು.
– ಕುಮಾರಸ್ವಾಮಿ ಎಂ.ಎನ್.
