ಹಾಸನ: ಕಸಬಾ ಹೋಬಳಿ ಬೆಳೆಗಾರರ ಸಂಘದ 2025–27ನೇ ಸಾಲಿನ ಕಾರ್ಯಕಾರಿ ಮಂಡಳಿಯ 11ನೇ ಮಾಸಿಕ ಸಭೆ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ, ವಿಚಾರ ವಿನಿಮಯ ಹಾಗೂ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಸಭೆ ರೈತ ಗೀತೆಯೊಂದಿಗೆ ಪ್ರಾರಂಭವಾಗಿ, ಇತ್ತೀಚಿಗೆ ಅಗಲಿದ ಬೆಳೆಗಾರ ಮಹನೀಯರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ಹಾಗೂ ಕರ್ನಾಟಕ ಗ್ರೋಯರ್ಸ್ ಫೆಡರೇಶನ್ನಲ್ಲಿ ನಡೆದ ಚರ್ಚೆಗಳ ಕುರಿತು ಸವಿಸ್ತಾರ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಮಾತನಾಡಿದ ಹೆಚ್ಡಿಪಿಎ ಅಧ್ಯಕ್ಷ ಎ. ಎಸ್. ಪರಮೇಶ್ ಅವರು, 21.05.2026ರಂದು ನಡೆಯಲಿರುವ ವಾರ್ಷಿಕ ಮಹಾಸಭೆ ಹಾಗೂ ಬೆಳೆಗಾರರ ಸಮಾವೇಶಕ್ಕೆ ಎಲ್ಲರೂ ಭಾಗವಹಿಸಲು ಆಹ್ವಾನಿಸಿದರು.
ಕಾಫಿ, ಕಾಳುಮೆಣಸು ಮತ್ತು ಅಡಿಕೆ ಬೆಳೆಗಳಲ್ಲಿ ಬೇಯಾರ್ ಕಂಪನಿಯ ಉತ್ಪನ್ನಗಳ ಕುರಿತು ಕಂಪನಿಯ ಪ್ರತಿನಿಧಿಗಳು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
2025–26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕಸಬಾ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಶಿಕ್ಷಕ ಹಾಗೂ ಕಾಫಿ ಬೆಳೆಗಾರ ವೆಂಕಟೇಶ್ ಅವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಶಿಸ್ತು ಮತ್ತು ಉತ್ತಮ ವ್ಯಕ್ತಿತ್ವದ ಮಹತ್ವವನ್ನು ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ಬೆಳೆಗಾರ ಸಂಘಟನೆಗಳ ಚಟುವಟಿಕೆಗಳ ಕುರಿತು ಸಹ ಮಾಹಿತಿ ಹಂಚಿಕೊಳ್ಳಲಾಯಿತು. ಹೆಚ್ಡಿಪಿಎ ಪಿಆರ್ಎಫ್ ಅಧ್ಯಕ್ಷ ಕೃಷ್ಣಮೂರ್ತಿ ಖಂಡಿಗೆ ಅವರು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ ಮಾದರಿಗಳ ಸಂಖ್ಯೆಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಕೆ.ವಿ. ಮೇಘರಾಜ್, ಎನ್.ಡಿ. ರಾಕೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
