ಸಕಲೇಶಪುರ: ಗುರುವಾರ ಬೆಳಗ್ಗೆ ಸುಮಾರು 11 ಗಂಟೆಗೆ ಸಕಲೇಶಪುರ ತಾಲ್ಲೂಕಿನ ಆಚಂಗಿ ಗ್ರಾಮದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಪ್ಯಾಕೆಟ್ ಮಾಡಿದ್ದ ಗೋಮಾಂಸ ಪತ್ತೆಯಾಗಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ.
ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ನೀಡಿದ ಮಾಹಿತಿಯ ಆಧಾರದ ಮೇಲೆ ಸಕಲೇಶಪುರ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಯಲ್ಲಿ 100 ಕೆ.ಜಿ.ಗೂ ಅಧಿಕ ಪ್ಯಾಕೆಟ್ ಮಾಡಿಟ್ಟಿದ್ದ ಗೋಮಾಂಸ ಪತ್ತೆಯಾಗಿದ್ದು, ಮಾರಾಟಕ್ಕೆ ಸಿದ್ಧಪಡಿಸಲಾಗಿತ್ತು ಎಂದು ತಿಳಿದುಬಂದಿದೆ.
ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಅತಿಕ್ ಖುರೇಶಿ ಎಂದು ಗುರುತಿಸಲಾಗಿದೆ. ದಾಳಿ ನಡೆದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಹಿಂದೂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ್ ಕಬ್ಬಿನಗದ್ದೆ ಅವರು, ಉಪವಿಭಾಗಾಧಿಕಾರಿಯನ್ನು ಭೇಟಿಯಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಹಾಗೂ ಗಡಿಪಾರು ಮಾಡುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸರು ಪ್ರಕರಣದ ಮೂಲ, ಸಾಗಾಟ ಜಾಲ ಹಾಗೂ ಸಂಬಂಧಿತ ವ್ಯಕ್ತಿಗಳ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
