ರಾಮನಾಥಪುರ- ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಸಂಗೀತೋತ್ಸವದಲ್ಲಿ ಕಲಾವಿದರ ಗಾನಸುಧೆಯು ಸಂಗೀತ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ.
ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮವೆಂದೆ ಪ್ರಸಿದ್ಧಿ ಪಡೆದಿರುವ ರುದ್ರಪಟ್ಟಣದಲ್ಲಿ ಜರುಗುತ್ತಿರುವ ಸಂಗೀತೋತ್ಸವವು ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು ಅನುಭವಿ ಕಲಾವಿದರ ರಾಗ ತಾಳ ಗಾನ ಲಯಗಳಿಂದ ಕಳೆಗಟ್ಟುತ್ತಿದೆ. ಪುರುಷರ ತಂಡ ಹಾಗೂ ಮಹಿಳಾ ಕಲಾವಿದರ ತಂಡ ನಡೆಸಿಕೊಟ್ಟ ಹತ್ತಾರು ಸಂಗೀತ ಕಚೇರಿಯು ಸಭಿಕರನ್ನು ಹಿಡಿದಿಟ್ಟಿತು. ವಿದ್ವಾನ್ ಎಚ್.ವಿ. ರಘುರಾಮ್, ವಿ. ಎಂ.ವಿ. ವಿಶ್ವಜಿತ್, ವಿ. ಕಾರ್ತಿಕೇಯ ಅವರು ಪಿಟೀಲು ತ್ರಯ ಹಾಗೂ ಎ. ರೇಣುಕಾಪ್ರಸಾದ್ ಮೃದಂಗ, ವಿ. ಎ.ಎಸ್.ಎನ್. ಖಂಜರ, ವಿ. ಶರತ್ ಕೌಶಿಕ್ ಘಟ ನಡೆಸಿಕೊಟ್ಟ ಪಿಟೀಲು ವಾದನ ಸಭಿಕರ ಮನ ಗೆಲ್ಲವಲ್ಲಿ ಯಶಸ್ವಿಯಾಯಿತು.

ಅಲ್ಲದೇ ವಿದ್ಬಾನ್ : ಜಿ. ಯೋಗವಂದನ ವೀಣೆ, ವಿ: ಅದಿತಿಪ್ರಕಾಶ್ ಪಿಟೀಲು, ವಿ:ಸ್ಮಿತಾ ಶ್ರೀ ಕಿರಣ್ ಕೊಳಲು, ವಿ: ದೀಪಿಕಾ ಶ್ರೀನಿವಾಸನ್ ಮೃದಂಗ ಮತ್ತು ವಿ: ಭಾಗ್ಯ ಲಕ್ಷ್ಮೀಕೃಷ್ಣ ಮೋರ್ಚಿಂಗ್ ನುಡಿಸುತ್ತಾ ಭೈರವಿ ರಾಗದಲ್ಲಿ ವೀರಿಬೋಣಿ ಕೃತಿಯನ್ನು , ಸಿದ್ಧಿ ವಿನಾಯಕಂ ಕೃತಿಯನ್ನು ಮೋಹನ ಕಲ್ಯಾಣಿ ರಾಗದಲ್ಲಿ, ಅರುಣರಾಗದಲ್ಲಿ ಅನುಪಮ ಗುಣಾಂಬುಧಿ ಕೃತಿಯನ್ನು, ಸಾಮರಾಗದಲ್ಲಿ ಅನ್ನಪೂರ್ಣೀ ವಿಶಾಲಾಕ್ಷಿ ಕೃತಿಯನ್ನು, ಭಾಗ್ಯದ ಲಕ್ಷ್ಮೀ ಬಾರಮ್ಮ ಕೃತಿಯನ್ನು ಮಧ್ಯಮಾವತಿ ರಾಗದಲ್ಲಿ ,ಭಜನಸೇಯರಾ ಕೃತಿಯನ್ನು ಧಮಾವತಿ ರಾಗದ ರೂಪಕ ತಾಳದಲ್ಲಿ ಮತ್ತು ಪಕ್ಕಲ ನೀಲಬಡಿ ಕೃತಿಯನ್ನು ಖರಹಪ್ರಿಯ ರಾಗದಲ್ಲಿ ತಾಳಬದ್ಧವಾಗಿ ಪ್ರಸ್ತುತಿ ಪಡಿಸಿದರು. ಹಿತಮಿತವಾಗಿ ಪಕ್ಕವಾದ್ಯಗಳನ್ನು ನುಡಿಸುತ್ತಾ ಕಚೇರಿಯ ಘನತೆಯನ್ನು ಹೆಚ್ಚಿಸಿದ ಕಲಾವಿದರು ಸಭಿಕರಿಂದ ಪ್ರಶಂಸೆಗೆ ಪಾತ್ರರಾದರು.

ವಿದ್ಬನ್ ಶ್ರೀ ಪಟ್ಟಾಭಿರಾಮ ಪಂಡಿತ್ ಟಿ.ಎಸ್ ರ ಗಾಯನವು ಮೋಡಿ ಮಾಡಿ ೩ ಗಂಟೆಗಳ ಸಮಯ ಸಂಗೀತೋತ್ಸವದಲ್ಲಿ ಸೇರಿದ್ದ ಸಂಗೀತ ಪ್ರಿಯರನ್ನು ನಾದಲೋಕಕ್ಕೆ ಕೊಂಡೊಯ್ಯಿತು. ವಿ: ಪಟ್ಟಾಭಿರಾಮರ ಸುಮಧುರ ಆಲಾಪನೆಯು ಸಭಿಕರ ಮನಗೆದ್ದು ತನ್ಮಯತೆಯಿಂದ ಕುಳಿತು ತಾಳ ಹಾಕುವಂತೆ ಮಾಡಿತು. ಆಕಾಶವಾಣಿ ಕಲಾವಿದರಾದ ವಿ: ಟಿ.ಕೆ ರಾಮಾನುಜಾಚಾರ್ಯಲು ಪಿಟೀಲು, ವಿ: ಹೆಚ್ ಎಸ್ ಸುಧೀಂದ್ರ ಮೃದಂಗ ಮತ್ತು ವಿ: ಓಂಕಾರ್. ಆರ್ ಘಟ ನುಡಿಸುತ್ತಾ ಕಚೇರಿಯನ್ನು ಆಸಕ್ತಿದಾಯಕವಾಗಿಸಿದರು.

ಅನುಭವಿ ಗಾಯಕ ವಿ: ಪಟ್ಟಾಭಿರಾಮ ಪಂಡಿತ್ ಮುತ್ತುಸ್ವಾಮಿ ದೀಕ್ಷಿತರ ಕೃತಿ ರಂಗಪುರ ವಿಹಾರ ಕೃತಿಯನ್ನು ಬೃಂದಾವನ ಸಾರಂಗ ರಾಗದಲ್ಲಿ , ತ್ಯಾಗರಾಜರ ರಚನೆ ಬಾಗಯಾನಯ್ಯ ಕೃತಿಯನ್ನು ಚಂದ್ರಜ್ಯೋತಿ ರಾಗದಲ್ಲಿ, ಎವ್ವರೂರ ಕೃತಿಯನ್ನು ಮೋಹನರಾಗದಲ್ಲಿ, ಎಂದರೂ ಮಹಾನು ಬಾವುಲು ಕೃತಿ, ಕೊಲುವೈ ಕೃತಿಯನ್ನು ಭೈರವಿ ರಾಗದಲ್ಲಿ , ರಾಗ ತಾನ ಪಲ್ಲವಿಯನ್ನು ಲತಾಂಗಿ ರಾಗದಲ್ಲಿ, ಪುರಂದರದಾಸರ ಮೋಸಹೋದೆ ಕೃತಿಯನ್ನು ಶುಭ ಪಂತುರಾವಳಿ ರಾಗದಲ್ಲಿ ಸುಶ್ರ್ಯಾವ್ಯವಾಗಿ ಹಾಡುತ್ತಾ ಸಂಗೀತ ಪ್ರಿಯರನ್ನು ತಲೆದೂಗುವಂತೆ ಮಾಡಿದರು.
ಈ ಸಂದರ್ಭದಲ್ಲಿ ಗಾನ ಕೋಗಿಲೆ ವಿದ್ವಂಸರಾದ ಡಾ. ಅರ್.ಕೆ. ಪದ್ಮನಾಭ ಅವರು ಇವರ ಸಂಗೀತ ಹಾಡಿ ಸಭಿಕರನ್ನು ಮೆಚ್ಚಿಸಿದ ಇವರ ಬಗ್ಗೆ ಪ್ರಶಂಸೆ ಮಾಡಿದರು.
– ಕುಮಾರಸ್ವಾಮಿ ಎಂ.ಎನ್.
