ರಾಮನಾಥಪುರ: ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ತ್ವರಿತ ಹಾಗೂ ಸಮರ್ಪಕ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಮನಾಥಪುರ ಹೋಬಳಿಯ ಮಧುರನಹಳ್ಳಿ ಗ್ರಾಮದಲ್ಲಿ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆರೋಗ್ಯ ಉಪ ಕೇಂದ್ರ ಕಟ್ಟಡಕ್ಕೆ ಮಾಜಿ ಸಚಿವರು ಹಾಗೂ ಶಾಸಕ ಎ. ಮಂಜು ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಸುಲಭವಾಗಿ ದೊರೆಯಬೇಕೆಂಬ ಉದ್ದೇಶದಿಂದ ಉಪ ಕೇಂದ್ರ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಗ್ರಾಮಸ್ಥರು ಸಹ ಕಾಮಗಾರಿಯ ಬಗ್ಗೆ ನಿಗಾವಹಿಸಿ, ಗುಣಮಟ್ಟದ ಕೆಲಸವಾಗುವಂತೆ ಸಹಕರಿಸಬೇಕು ಎಂದು ಹೇಳಿದರು. ಆರೋಗ್ಯ ಉಪ ಕೇಂದ್ರ ನಿರ್ಮಾಣವಾದ ಬಳಿಕ ಸಾರ್ವಜನಿಕರು ಅದರ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಉಪ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಉಚಿತವಾಗಿ ಜಮೀನು ದಾನ ನೀಡಿದ ಎ.ಎಸ್. ಗೋವಿಂದಯ್ಯ ಅವರ ಪುತ್ರರಾದ ಎ.ಜಿ. ನಾಗೇಂದ್ರ ಹಾಗೂ ಕೃಷ್ಣಮೂರ್ತಿ ಅವರನ್ನು ಶಾಸಕ ಎ. ಮಂಜು ಗೌರವಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
