ಹಾಸನ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ವತಿಯಿಂದ ಹಾಸನ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸಾಹಿತಿ ಹಾಗೂ ಕೇಂದ್ರ ಸಮಿತಿಯ ಟ್ರಸ್ಟಿ ವಾಸು ಸಮುದ್ರವಳ್ಳಿ ಅವರನ್ನು ಎರಡನೇ ಅವಧಿಗೆ ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.
ಮೇ 23, 2026ರಂದು ಹಾಸನ ನಗರದಲ್ಲಿ ನಡೆದ ಟ್ರಸ್ಟಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, 2018ರಿಂದ 2023ರವರೆಗೆ ಹಾಸನ ಜಿಲ್ಲಾಧ್ಯಕ್ಷರಾಗಿ ಯಶಸ್ವಿಯಾಗಿ ಸಂಘಟನೆಯನ್ನು ಮುನ್ನಡೆಸಿ ವಿವಿಧ ಗುಣಮಟ್ಟದ ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ವೇದಿಕೆಯನ್ನು ಬಲಪಡಿಸಿದ್ದ ವಾಸು ಸಮುದ್ರವಳ್ಳಿ ಅವರ ಸೇವೆಯನ್ನು ಪರಿಗಣಿಸಿ, ಎರಡನೇ ಅವಧಿಗೂ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕೇಂದ್ರ ಸಮಿತಿಯ ಟ್ರಸ್ಟಿಗಳಾದ ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜ್ ಹಾಗೂ ವಾಸು ಸಮುದ್ರವಳ್ಳಿ ಉಪಸ್ಥಿತರಿದ್ದರು. ದೇಸು ಆಲೂರು ಮತ್ತು ಡಾ. ಪಿ. ದಿವಾಕರ ನಾರಾಯಣ ದೂರವಾಣಿ ಮೂಲಕ ಆಯ್ಕೆಗೆ ಸಮ್ಮತಿ ಸೂಚಿಸಿದರು.
ವೇದಿಕೆಯ ಬೈಲಾ ನಿಯಮಾನುಸಾರ ಹಾಸನ ಜಿಲ್ಲೆ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
