ಚನ್ನರಾಯಪಟ್ಟಣ, ಮೇ 25: ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆ ತಾಲ್ಲೂಕಿನಲ್ಲಿ ರಸಗೊಬ್ಬರಗಳ ಕೊರತೆಯಾಗದಂತೆ ಕೃಷಿ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ರೈತರಿಗೆ ಉಚಿತ ಆಲಸಂದೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದ ಕಾರಣ ರಸಗೊಬ್ಬರಗಳ ಅಭಾವ ಸೃಷ್ಟಿಯಾಗಿಲ್ಲ. ಆದರೆ ಜೂನ್ನಲ್ಲಿ ಉತ್ತಮ ಮಳೆಯಾದರೆ ಪ್ರಸ್ತುತ ಇರುವ ದಾಸ್ತಾನು ಪ್ರಮಾಣ ಸಾಲದ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಸಿದರು.
ತಾಲ್ಲೂಕಿಗೆ ವಾರ್ಷಿಕವಾಗಿ 31,759 ಟನ್ ರಸಗೊಬ್ಬರ ಅವಶ್ಯಕತೆ ಇದ್ದು, ಪ್ರಸ್ತುತ 9,980 ಟನ್ ಮಾತ್ರ ದಾಸ್ತಾನು ಇದೆ. ಹೀಗಾಗಿ ಮೇಲ್ಮಟ್ಟದ ಅಧಿಕಾರಿಗಳೊಂದಿಗೆ ತಕ್ಷಣ ಪತ್ರ ವ್ಯವಹಾರ ನಡೆಸಿ ಅಗತ್ಯ ಪ್ರಮಾಣದ ಗೊಬ್ಬರ ಸರಬರಾಜಿಗೆ ಕ್ರಮವಹಿಸುವಂತೆ ಕೃಷಿ ಇಲಾಖೆಗೆ ಸೂಚಿಸಿದರು.
ಪ್ರಸ್ತುತ 1,056 ಟನ್ ಯೂರಿಯಾ, 447 ಟನ್ ಡಿಎಪಿ, 3,281 ಟನ್ ಎನ್ಪಿಕೆ, 102 ಟನ್ ಎಂಒಪಿ ಹಾಗೂ 102 ಟನ್ ಎಸ್ಎಸ್ಪಿ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು. ತಾಲ್ಲೂಕಿಗೆ ವಾರ್ಷಿಕವಾಗಿ 13,313 ಟನ್ ಯೂರಿಯಾ, 2,500 ಟನ್ ಡಿಎಪಿ, 11,904 ಟನ್ ಎನ್ಪಿಕೆ, 2,467 ಟನ್ ಎಂಒಪಿ ಹಾಗೂ 1,530 ಟನ್ ಎಸ್ಎಸ್ಪಿ ಅಗತ್ಯವಿದೆ ಎಂದರು.

ಮುಂಗಾರು ಹಂಗಾಮಿಗೆ ಬೇಕಾದ ಬೀಜ ಮತ್ತು ರಸಗೊಬ್ಬರಗಳನ್ನು ಸಮರ್ಪಕವಾಗಿ ಸಂಗ್ರಹಿಸಿಕೊಳ್ಳುವಂತೆ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಸರ್ಕಾರಕ್ಕೆ ಪತ್ರ ಕಳುಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕಿನ ಎಲ್ಲಾ ಆರು ಹೋಬಳಿಗಳಲ್ಲೂ ಒಂದೊಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಆಲಸಂದೆ ಬೀಜ ವಿತರಣೆ ಮಾಡಲಾಗುತ್ತಿದ್ದು, ತೊಗರಿ ಮತ್ತು ಅವರೆ ಬೀಜಗಳನ್ನೂ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ. ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ತೆಂಗಿನ ತೋಟಗಳಿಗೆ ಹಸಿರೆಲೆ ಗೊಬ್ಬರವಾಗಿ ಬಳಕೆಯಾಗುವ ಸೆಣಬು ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಈ ಬಾರಿ 1,000 ಕ್ವಿಂಟಾಲ್ ಸೆಣಬು ಬೀಜದ ಅವಶ್ಯಕತೆ ಇದೆ. ಈ ಕುರಿತು ರಾಜ್ಯ ನಿರ್ದೇಶಕರಿಗೆ ಮನವಿ ಮಾಡಲಾಗಿದ್ದು, ಕೃಷಿ ಸಚಿವರಿಗೂ ಅಗತ್ಯ ವಿತರಣೆಗೆ ಮನವಿ ಮಾಡುವುದಾಗಿ ಶಾಸಕರು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮೋಹನ್ ಕುಮಾರ್ ಮಾತನಾಡಿ, ರೈತರು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ನೀರನ್ನು ಮಿತವಾಗಿ ಬಳಕೆ ಮಾಡುವ ಜೊತೆಗೆ ಕೃಷಿ ಸಮಸ್ಯೆಗಳಿದ್ದಲ್ಲಿ ರೈತ ಸಂಪರ್ಕ ಕೇಂದ್ರಗಳು ಅಥವಾ ಕೃಷಿ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಪರಿಹಾರ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ದಿಂಡಗೂರು ವಿಎಸ್ಎಸ್ಎನ್ ಅಧ್ಯಕ್ಷ ರಾಮಚಂದ್ರ, ಗ್ರಾಮದ ಮುಖಂಡ ಜಯಣ್ಣ, ಕಸಬಾ ಹೋಬಳಿ ಕೃಷಿ ಅಧಿಕಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ ಕೆ
