ಹಾಸನ: ಕನ್ನಡ ನಾಡಿನ ಸಾಂಸ್ಕೃತಿಕ ವೈಭವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ, ಚನ್ನರಾಯಪಟ್ಟಣ ವತಿಯಿಂದ ವಿಶ್ವ ದಾಖಲೆ ನಿರ್ಮಿಸಲು ಮೇ ೩೧, ೨೦೨೬ರಂದು ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸ್ಟೇಡಿಯಂನಲ್ಲಿ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯೋಜನ ಕಾರ್ಯದರ್ಶಿ ವಿದುಷಿ ಡಾ. ಸ್ವಾತಿ ಪಿ. ಭಾರದ್ವಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವ ದಾಖಲೆ ನಿರ್ಮಿಸುವ ಮಹತ್ವಾಕಾಂಕ್ಷಿ ಪ್ರಯತ್ನಕ್ಕೆ ಅಕಾಡೆಮಿ ಸಜ್ಜಾಗಿದೆ. ಸಂಜೆ ೪ ಗಂಟೆಗೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ೩೦೦ಕ್ಕೂ ಹೆಚ್ಚು ನೃತ್ಯ ಕಲಾವಿದರು ಏಕಕಾಲದಲ್ಲಿ ದೇಶಭಕ್ತಿ ಗೀತೆಗಳಿಗೆ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಲಿದ್ದು, ಉದ್ಘಾಟನೆಯನ್ನು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ನೆರವೇರಿಸಲಿದ್ದಾರೆ. “ಲಾರ್ಜೆಸ್ಟ್ ನಂಬರ್ ಆಫ್ ಪಾರ್ಟಿಸಿಪೆಂಟ್ಸ್ ಪರ್ಫಾರ್ಮಿಂಗ್ ಪೇಟ್ರಿಯಾಟಿಕ್ ಸಾಂಗ್ಸ್ ಇನ್ ಕ್ಲಾಸಿಕಲ್ ಡ್ಯಾನ್ಸ್ ಫಾರ್ಮ್” ವಿಭಾಗದಲ್ಲಿ ವಿಶ್ವ ದಾಖಲೆ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದರು. ಈ ಕಾರ್ಯಕ್ರಮಕ್ಕೆ ಮಂತ್ರಾಲಯದ ಪರಮಪೂಜ್ಯ ಡಾ. ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಆಶೀರ್ವಾದ ದೊರೆತಿದ್ದು, ಬೆಂಗಳೂರಿನ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ವಿ. ಶ್ರೀಶಾನಂದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು, ಕಲಾಭಿಮಾನಿಗಳು ಹಾಗೂ ಸಾಂಸ್ಕೃತಿಕ ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈಗಾಗಲೇ ಮಂತ್ರಾಲಯದಲ್ಲಿ ಏಕಕಾಲದಲ್ಲಿ ೩೦೦ ನೃತ್ಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ “ನಾಮ ರಾಮಾಯಣ” ಗೀತೆಗೆ ನೃತ್ಯ ಪ್ರದರ್ಶನ ನೀಡುವ ಮೂಲಕ “ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್” ಸಾಧನೆ ಮಾಡಿರುವ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ, ಹಲವು ಸಾಂಸ್ಕೃತಿಕ ದಾಖಲೆಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ಇದೀಗ ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ಕನ್ನಡದ ಸಾಂಸ್ಕೃತಿಕ ಪರಂಪರೆಯ ಹೆಗ್ಗಳಿಕೆಯನ್ನು ಸಾರುವ ಹೊಸ ದಾಖಲೆಗೆ ಅಕಾಡೆಮಿ ಮುಂದಾಗಿದೆ ಎಂದು ಹೇಳಿದರು. ಶಾಸ್ತ್ರೀಯ ನೃತ್ಯ ಕೇವಲ ಕಲೆಯಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ದೇಶಭಕ್ತಿಯ ಪ್ರತೀಕವಾಗಿದೆ. ಯುವಪೀಳಿಗೆಗೆ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಅನಿತಾ ಪ್ರಕಾಶ್, ಅಕಾಡೆಮಿ ಸಂಚಾಲಕ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ .ಕೆ.
