ಕೊರಟಗೆರೆ: ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆ ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆ ಉಂಟಾಗದಂತೆ ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ಪಟ್ಟಣದ ವಿವಿಧ ರಸಗೊಬ್ಬರ ಅಂಗಡಿಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರತಿ ಅಂಗಡಿಗಳಲ್ಲೂ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಸ್ಟಾಕ್ ಲಭ್ಯವಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು. ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಮತ್ತು ಬಿತ್ತನೆ ಬೀಜವನ್ನು ಸಂಗ್ರಹಿಸಿಡುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ಮಂಜುನಾಥ್, “ಯಾವುದೇ ರಸಗೊಬ್ಬರ ಅಂಗಡಿಗಳಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಬೇಕು. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮಳೆ ಬಿದ್ದ ನಂತರವೂ ಅಗತ್ಯ ಪ್ರಮಾಣದ ರಸಗೊಬ್ಬರ ಮತ್ತು ಬಿತ್ತನೆ ಬೀಜ ಲಭ್ಯವಿರುತ್ತದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿ ರುದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಉಮೇಶ್, ಆರ್ಐ ಬಸವರಾಜು, ಪುರಸಭೆ ಆರ್ಐ ವೇಣುಗೋಪಾಲ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
