ಕೊರಟಗೆರೆ :– ತಾಲ್ಲೂಕಿನ ಕೋರ ಹೋಬಳಿಯ ಚಿಕ್ಕೋನಹಳ್ಳಿ ಗ್ರಾಮದಲ್ಲಿ ನಡೆದ “CK BOYS ಕಪ್” ಕ್ರಿಕೆಟ್ ಟೂರ್ನಿಯಲ್ಲಿ ಶಿವು ನಾಯಕತ್ವದ ಕಲ್ಸಟ್ ಕುಂಟೆ ಅಶ್ವಮೇಧ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಅಶ್ವಮೇಧ ತಂಡವು ಎದುರಾಳಿ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ತಂಡಕ್ಕೆ ಟ್ರೋಫಿಯೊಂದಿಗೆ ₹40 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಟೂರ್ನಮೆಂಟ್ ಅವಧಿಯಲ್ಲಿ ಅಶ್ವಮೇಧ ತಂಡದ ಪರವಾಗಿ ಯಶು, ಕಾಶಿ, ಶಿವು, ಪ್ರಸಾದ್, ನವೀನ್, ಪ್ರದೀಪ್ ಹಾಗೂ ಹರ್ಷಿತ್ ಉತ್ತಮ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಗ್ರಾಮದ ಕ್ರೀಡಾಭಿಮಾನಿಗಳು ಹಾಗೂ ಯುವಕರು ಪಂದ್ಯಾವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರನ್ನು ಉತ್ತೇಜಿಸಿದರು. ಆಯೋಜಕರು ಯಶಸ್ವಿ ಟೂರ್ನಿ ನಡೆಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
– ಶ್ರೀನಿವಾಸ್ ಕೊರಟಗೆರೆ.
