ಬೇಲೂರು: ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಸಿಕ ನಿರ್ದೇಶಕರ ಸಭೆ ನಗರದ ತಣ್ಣೀರುಹಳ್ಳಿ ಶ್ರೀ ಮಠದ ಆವರಣದಲ್ಲಿ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷರು, ಜಿಲ್ಲಾ ನಿರ್ದೇಶಕರು ಹಾಗೂ ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿ ಸಂಘಟನಾತ್ಮಕ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಅವರನ್ನು ಪದಚ್ಯುತಿಗೊಳಿಸುವಂತೆ ಕೆಲವು ಸದಸ್ಯರು ರಾಜ್ಯಾಧ್ಯಕ್ಷ ಡಾ. ಸೋಮಶೇಖರ್ ಅವರಿಗೆ ದೂರು ನೀಡಿರುವ ವಿಷಯ ಪ್ರಮುಖ ಚರ್ಚೆಗೆ ಗ್ರಾಸವಾಯಿತು.

ಈ ವೇಳೆ ಮಾತನಾಡಿದ ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳ ಹಾಲಪ್ಪ, “ಶರಣ ಸಾಹಿತ್ಯ ಪರಿಷತ್ತು ಸುತ್ತೂರಿನ ಪರಮಪೂಜ್ಯ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಕನಸಿನ ಕೂಸು. ಸಂಸ್ಥೆಗೆ ತನ್ನದೇ ಆದ ಬೈಲಾ ಮತ್ತು ನಿಯಮಗಳಿದ್ದು, ಅಧ್ಯಕ್ಷರ ಬದಲಾವಣೆ ಕುರಿತು ರಾಜ್ಯಾಧ್ಯಕ್ಷರು ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಯಾವುದೇ ಅಭ್ಯಂತರವಿಲ್ಲ. ಅಧಿಕಾರ ಶಾಶ್ವತವಲ್ಲ. ಆದರೆ ಎಲ್ಲರೂ ಒಗ್ಗಟ್ಟಿನಿಂದ ಸಂಸ್ಥೆಯ ಬಲವರ್ಧನೆಗೆ ಶ್ರಮಿಸಬೇಕು” ಎಂದು ಹೇಳಿದರು.

ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಪುಟ್ಟರಾಜು ಮಾತನಾಡಿ, “ಹಾಸನ ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಎಂ.ಎನ್. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಕೆಲವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯಾಧ್ಯಕ್ಷರು ಹಾಸನಕ್ಕೆ ಬಂದು ಎಲ್ಲರನ್ನು ಕರೆದು ಚರ್ಚೆ ನಡೆಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ” ಎಂದರು.

ಸಭೆಯಲ್ಲಿ ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಅರಕಲಗೂಡು ತಾಲ್ಲೂಕು ಅಧ್ಯಕ್ಷ ಅಮೃತೇಶ್, ಅಲೂರು ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ಸಕಲೇಶಪುರ ತಾಲ್ಲೂಕು ಅಧ್ಯಕ್ಷ ಲೋಹಿತ್, ಚನ್ನರಾಯಪಟ್ಟಣ ಘಟಕದ ಅಧ್ಯಕ್ಷೆ ಕಲ್ಪನಾ ಸಿದ್ದುರಾಜ್ ಹಾಗೂ ಜಿಲ್ಲಾ ಖಜಾಂಚಿ ರುದ್ರಸ್ವಾಮಿ ಸೇರಿದಂತೆ ಹಲವರು ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಸಂಘಟನೆಯನ್ನು ಕ್ರಿಯಾಶೀಲವಾಗಿ ಮುನ್ನಡೆಸಿರುವ ಎಂ.ಎನ್. ಕುಮಾರಸ್ವಾಮಿ ಅವರ ಬದಲಾವಣೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮಾತನಾಡಿ, “ಸಭೆಯಲ್ಲಿ ಎಲ್ಲ ನಿರ್ದೇಶಕರು ಒಮ್ಮತದಿಂದ ಜಿಲ್ಲಾಧ್ಯಕ್ಷರು ಮುಂದುವರಿಯಲಿ ಎಂಬ ನಿರ್ಣಯ ಕೈಗೊಂಡಿದ್ದಾರೆ. ಈ ಸಂಬಂಧ ರಾಜ್ಯಾಧ್ಯಕ್ಷರಿಗೆ ಶೀಘ್ರದಲ್ಲೇ ಪತ್ರ ರವಾನಿಸಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ರಾಮನಾಥಪುರದ ಶ್ರೀನಿವಾಸ್ ಹಾಗೂ ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾಗಿ ಬೇಲೂರಿನ ಚಂದನ್ ಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಶಿರೇಖಾ, ಗಿರಿಜಾ ನಿರ್ವಾಣಿ, ಕಾರ್ಯದರ್ಶಿ ವಿಜಯ ಧರ್ಮಪ್ಪ, ಬೇಲೂರು ಕಾರ್ಯದರ್ಶಿ ರಾಜಕುಮಾರ್, ಖಜಾಂಚಿ ಧನಂಜಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶಿವಕುಮಾರ್ ಕಟ್ಟಾಯ.
