ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ತೀವ್ರಗೊಂಡಿರುವ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ದಿನಾಂಕ ಹಾಗೂ ಮುಹೂರ್ತ ನಿಗದಿಯಾಗಿದ್ದು, ಜೂನ್ 5ರ ಶುಕ್ರವಾರ ಮಧ್ಯಾಹ್ನ 12:30ಕ್ಕೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ತಮ್ಮ ಆಪ್ತ ಜ್ಯೋತಿಷಿಯ ಸಲಹೆಯ ಮೇರೆಗೆ ಈ ದಿನಾಂಕ ನಿಗದಿಪಡಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಈ ಹಿಂದೆ ಮೇ ತಿಂಗಳ ಕೊನೆಯ ವಾರದಲ್ಲೇ ಪ್ರಮಾಣ ವಚನ ನಡೆಯಲಿದೆ ಎಂಬ ವದಂತಿಗಳು ಕೇಳಿಬಂದಿದ್ದವು. ಆದರೆ ಇದೀಗ ಜೂನ್ 5ರಂದು ಶಕ್ತಿ ಪ್ರದರ್ಶನದೊಂದಿಗೆ ಭವ್ಯ ಕಾರ್ಯಕ್ರಮ ಆಯೋಜಿಸಲು ಸಿದ್ಧತೆಗಳು ಆರಂಭವಾಗಿವೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕರ ಸಮ್ಮುಖದಲ್ಲಿ ಬೃಹತ್ ಮಟ್ಟದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದು, ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಐತಿಹಾಸಿಕ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೊಸ ಸಚಿವ ಸಂಪುಟದ ಸದಸ್ಯರೂ ಅಧಿಕಾರ ಸ್ವೀಕರಿಸಲಿದ್ದು, ಮೊದಲ ಹಂತದಲ್ಲಿ ಏಳು ರಿಂದ ಎಂಟು ಮಂದಿ ಹಿರಿಯ ಹಾಗೂ ಅನುಭವಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಥವಾ ರಾಜ್ಯ ಸರ್ಕಾರದಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
