ಚನ್ನರಾಯಪಟ್ಟಣ: ಮಾಜಿ ಸಚಿವರು ಹಾಗೂ ಟಿ. ನರಸೀಪುರ ಕ್ಷೇತ್ರದ ಹಾಲಿ ಶಾಸಕರಾದ ಎಚ್.ಸಿ. ಮಹದೇವಪ್ಪ ಅವರಿಗೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ ಎಂ.ಆರ್. ರಂಗಸ್ವಾಮಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಶ್ರೀಕಂಠಯ್ಯ ವೃತ್ತ, ಕೆ.ಆರ್. ಸರ್ಕಲ್ ಮಾರ್ಗವಾಗಿ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿದ ಮಹದೇವಪ್ಪ ಅಭಿಮಾನಿಗಳು, ಬಳಿಕ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಎಚ್.ಸಿ. ಮಹದೇವಪ್ಪ ಪರ ಘೋಷಣೆಗಳನ್ನು ಕೂಗಿ ಬೆಂಬಲ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಎಂ.ಆರ್. ರಂಗಸ್ವಾಮಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಎಚ್.ಸಿ. ಮಹದೇವಪ್ಪ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು, ಹಳೆ ಮೈಸೂರು ಭಾಗದ ದಲಿತ ಸಮುದಾಯದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಟಿ. ನರಸೀಪುರ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಜನಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಜನಪರ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ ಎಂದು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಾಮರ್ಥ್ಯ ಮಹದೇವಪ್ಪ ಅವರಿಗಿದ್ದು, ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಹೆಚ್ಚಿನ ಜನಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಚ್.ಸಿ. ಮಹದೇವಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಎಸ್.ಎಲ್. ದೊರೆರಾಜು, ಆಶ್ರಯ ಸಮಿತಿಯ ಮಾಜಿ ನಿರ್ದೇಶಕ ಕೆ.ಎನ್. ನಾಗೇಶ್, ತಾಲೂಕು ಭೂ ಮಂಜೂರಾತಿ ಸಮಿತಿಯ ಮಾಜಿ ಸದಸ್ಯ ಮತಿಗಟ್ಟ ರಂಗಸ್ವಾಮಿ, ಯುವ ಕಾಂಗ್ರೆಸ್ ಮುಖಂಡ ಶ್ರವಣೇರಿ ದೊರೆರಾಜು, ನಾಗಸಮುದ್ರ ಬಾಲು, ಕಬ್ಬಾಳು ಮಹೇಶ್, ಸಂತೋಷ್ ನಲ್ಲೂರು, ಸಿ.ಪಿ. ಮಂಜುನಾಥ್, ಕೃಷ್ಣ, ಮಂಜುನಾಥ್, ನವೀನ್ ರಂಗಸ್ವಾಮಿ, ಕುರುವಂಕ ಮಂಜುನಾಥ್, ಮಿಮಿಕ್ರಿ ಗೋವಿಂದ್, ಹರೀಶ್, ಪ್ರಸನ್ನ ಹೊಸೂರು, ಬಿ.ಪಿ. ಧರ್ಮರಾಜ್, ಹರಿಪ್ರಸಾದ್, ಡೊನಾಲ್ಡ್ ರಂಗಸ್ವಾಮಿ, ಗಾಯತ್ರಿ ಬಡಾವಣೆ ಮಂಜುನಾಥ್, ಜಿ.ಕೆ. ಮಂಜುನಾಥ್, ಮನೋಹರ್, ರವಿರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
