ಬೆಂಗಳೂರು/ಹಾವೇರಿ, ಜೂನ್ 2: ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಶೀಗಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರು ಮೂಲದ ‘ಭರವಸೆ’ ಸಂಸ್ಥೆ 10 ಕಂಪ್ಯೂಟರ್ಗಳನ್ನು ಕೊಡುಗೆಯಾಗಿ ನೀಡಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣದ ಹೊಸ ಅವಕಾಶ ಕಲ್ಪಿಸಿದೆ.
ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ಸುನಿಲ್ ಗೌಡ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಸರ್ಕಾರಿ ಶಾಲಾ ಮಕ್ಕಳೂ ತಂತ್ರಜ್ಞಾನ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಸ್ಥೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ.
ಉತ್ತರ ಕರ್ನಾಟಕದ ಅನೇಕ ಸರ್ಕಾರಿ ಶಾಲೆಗಳು ಇನ್ನೂ ಮೂಲಭೂತ ತಾಂತ್ರಿಕ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶೀಗಿಹಳ್ಳಿ ಶಾಲೆಗೆ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಮಹತ್ವದ ಕೊಡುಗೆಯಾಗಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಭರವಸೆ ಸಂಸ್ಥೆಯ ‘ಅಕ್ಷರ’ ಯೋಜನೆಯಡಿ ರಾಜ್ಯದ ಹಲವು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಕಂಪ್ಯೂಟರ್ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರತಿನಿಧಿ ಮಂಜೇಶ್ ಕುಮಾರ್ ತಿಳಿಸಿದ್ದಾರೆ.
“ಡಿಜಿಟಲ್ ಜ್ಞಾನ ಇಂದಿನ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಭರವಸೆ ಸಂಸ್ಥೆಯ ನೆರವಿನಿಂದ ನಮ್ಮ ವಿದ್ಯಾರ್ಥಿಗಳ ಕನಸುಗಳಿಗೆ ಹೊಸ ರೆಕ್ಕೆ ಬಂದಿದೆ. ಈ ಕೊಡುಗೆಗಾಗಿ ಶಾಲೆಯ ಸಮಸ್ತ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸುತ್ತಾರೆ” ಎಂದು ಶಾಲೆಯ ಬೋಧಕ ವರ್ಗ ತಿಳಿಸಿದೆ.
ಗ್ರಾಮೀಣ ಮಕ್ಕಳ ಶಿಕ್ಷಣ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಭರವಸೆ ಸಂಸ್ಥೆ, ಮುಂದಿನ ದಿನಗಳಲ್ಲಿ ರಾಜ್ಯದ ಇನ್ನಷ್ಟು ಸರ್ಕಾರಿ ಶಾಲೆಗಳಿಗೆ ಇದೇ ರೀತಿಯ ನೆರವು ವಿಸ್ತರಿಸುವ ಯೋಜನೆ ಹೊಂದಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
