ನವದೆಹಲಿ, ಜೂನ್ 2:
ಡಿಜಿಟಲ್ ಯುಗದಲ್ಲಿ ವ್ಯಕ್ತಿಯ ಗೌಪ್ಯತೆ ಹಕ್ಕಿಗೆ ಮಹತ್ವದ ಬಲ ನೀಡುವ ತೀರ್ಪೊಂದನ್ನು ದೆಹಲಿ ಹೈಕೋರ್ಟ್ ನೀಡಿದ್ದು, ‘ಮರೆತುಹೋಗುವ ಹಕ್ಕು’ (Right to be Forgotten) ಎಂಬ ಪರಿಕಲ್ಪನೆಯನ್ನು ಮೂಲಭೂತ ಹಕ್ಕಿನ ಭಾಗವೆಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಮೇ 29, 2026ರಂದು ನೀಡಿದ 144 ಪುಟಗಳ ತೀರ್ಪಿನಲ್ಲಿ, ಭಾರತದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ದೊರೆಯುವ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಅವಿಭಾಜ್ಯ ಅಂಗವಾಗಿ ‘ಮರೆತುಹೋಗುವ ಹಕ್ಕು’ವನ್ನು ಗುರುತಿಸಿದ್ದಾರೆ.
ಈ ತೀರ್ಪು 2016ರಿಂದ ವಿವಿಧ ವ್ಯಕ್ತಿಗಳು ಸಲ್ಲಿಸಿದ್ದ 30ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆಯ ಬಳಿಕ ಹೊರಬಂದಿದೆ. ಡಿಜಿಟಲ್ ವೇದಿಕೆಗಳಲ್ಲಿ ನ್ಯಾಯಾಲಯದ ದಾಖಲೆಗಳು ಲಭ್ಯವಿರುವುದರಿಂದ ಖಾಸಗಿ ಜೀವನದ ಮೇಲೆ ಉಂಟಾಗುವ ಪರಿಣಾಮಗಳನ್ನು ಪರಿಗಣಿಸಿ ನ್ಯಾಯಾಲಯ ಈ ಮಹತ್ವದ ಮಾರ್ಗಸೂಚಿಗಳನ್ನು ರೂಪಿಸಿದೆ.
ತೀರ್ಪಿನ ಪ್ರಕಾರ, ಅಪರಾಧ ಪ್ರಕರಣಗಳಲ್ಲಿ ಖುಲಾಸೆಯಾದವರು, ಆರೋಪಗಳಿಂದ ಮುಕ್ತಗೊಂಡವರು, ನ್ಯಾಯಾಲಯದಿಂದ ಪ್ರಕರಣ ರದ್ದುಪಡಿಸಿಕೊಂಡವರು ಅಥವಾ ರಾಜಿ ಮೂಲಕ ವಿವಾದ ಇತ್ಯರ್ಥಗೊಂಡವರು ತಮ್ಮ ಹೆಸರನ್ನು ಆನ್ಲೈನ್ ಹುಡುಕಾಟ ಫಲಿತಾಂಶಗಳಿಂದ ತೆಗೆದುಹಾಕಲು ಅರ್ಹರಾಗಿರುತ್ತಾರೆ.
ಅದೇ ರೀತಿ, ವೈಯಕ್ತಿಕ ನಾಗರಿಕ ವಿವಾದಗಳು, ದಾಂಪತ್ಯ ಸಂಬಂಧಿತ ಪ್ರಕರಣಗಳು ಹಾಗೂ ನ್ಯಾಯಾಂಗ ದಾಖಲೆಗಳಲ್ಲಿ ಕೇವಲ ಪ್ರಾಸಂಗಿಕವಾಗಿ ಹೆಸರು ಉಲ್ಲೇಖಗೊಂಡಿರುವ ವ್ಯಕ್ತಿಗಳಿಗೂ ಈ ಹಕ್ಕು ಅನ್ವಯವಾಗುತ್ತದೆ.
ನ್ಯಾಯಾಲಯವು ಗೂಗಲ್ ಸೇರಿದಂತೆ ಸರ್ಚ್ ಎಂಜಿನ್ಗಳು ಮತ್ತು ಇಂಡಿಯನ್ ಕಾನೂನ್ (Indian Kanoon) ಸೇರಿದಂತೆ ಕಾನೂನು ಡೇಟಾಬೇಸ್ಗಳಿಗೆ ನಿರ್ದಿಷ್ಟ ಪ್ರಕರಣಗಳಲ್ಲಿ ವ್ಯಕ್ತಿಯ ಹೆಸರನ್ನು ಆಧರಿಸಿದ ಹುಡುಕಾಟ ಫಲಿತಾಂಶಗಳನ್ನು ತೆಗೆದುಹಾಕುವಂತೆ (De-indexing) ನಿರ್ದೇಶನ ನೀಡಿದೆ.
ಆದರೆ ನ್ಯಾಯಾಲಯದ ತೀರ್ಪುಗಳು ಸಂಪೂರ್ಣವಾಗಿ ಅಳಿಸಲ್ಪಡುವುದಿಲ್ಲ. ಪ್ರಕರಣ ಸಂಖ್ಯೆ, ಉಲ್ಲೇಖಗಳು ಅಥವಾ ಇತರೆ ಕಾನೂನು ಮಾಹಿತಿಯ ಮೂಲಕ ತೀರ್ಪುಗಳು ಸಾರ್ವಜನಿಕವಾಗಿ ಲಭ್ಯವಿರುತ್ತವೆ. ನ್ಯಾಯಾಲಯದ ದಾಖಲೆಗಳಲ್ಲಿ ಮೂಲ ತೀರ್ಪುಗಳು ಯಾವುದೇ ಬದಲಾವಣೆ ಇಲ್ಲದೆ ಸಂರಕ್ಷಿಸಲ್ಪಡುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತೀರ್ಪಿನಲ್ಲಿ, ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯ ಹೆಸರು ಮತ್ತು ವೈಯಕ್ತಿಕ ಗುರುತು ವಿವರಗಳನ್ನು ಮರೆಮಾಚಬಹುದಾದರೂ, ನ್ಯಾಯಾಲಯದ ತೀರ್ಪಿನ ಕಾನೂನು ವಿಶ್ಲೇಷಣೆ, ತರ್ಕ ಹಾಗೂ ಅಂತಿಮ ನಿರ್ಣಯಗಳು ಸಾರ್ವಜನಿಕ ವಲಯದಲ್ಲಿ ಲಭ್ಯವಾಗುತ್ತವೆ ಎಂದು ತಿಳಿಸಲಾಗಿದೆ.
2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿ ಮಧ್ಯವರ್ತಿಗಳು ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕಾಗಿರುವುದರಿಂದ, ಈ ತೀರ್ಪು ಡಿಜಿಟಲ್ ಗೌಪ್ಯತೆ ಮತ್ತು ಮಾಹಿತಿಯ ಹಕ್ಕಿನ ನಡುವಿನ ಸಮತೋಲನ ಸಾಧಿಸುವ ಪ್ರಮುಖ ಹೆಜ್ಜೆಯಾಗಿದೆ.
ಕಾನೂನು ತಜ್ಞರ ಪ್ರಕಾರ, ಈ ತೀರ್ಪು ಭಾರತದ ಡಿಜಿಟಲ್ ಹಕ್ಕುಗಳು ಮತ್ತು ವೈಯಕ್ತಿಕ ಗೌಪ್ಯತೆ ಕುರಿತ ನ್ಯಾಯಶಾಸ್ತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗಿದೆ.
