ಕೊರಟಗೆರೆ :– ಗ್ರಾಮೀಣ ಬದುಕಿನ ಆರ್ಥಿಕ ಬೆನ್ನೆಲುಬಾಗಿರುವ ಹೈನುಗಾರಿಕೆ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದು, ಸ್ವಾವಲಂಬಿ ಜೀವನಕ್ಕೆ ದಾರಿದೀಪವಾಗಿದೆ ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಸಾದರ ಸಮುದಾಯ ಭವನದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಸಿದ್ದಗಂಗಯ್ಯ ಅವರ 62ನೇ ಜನ್ಮದಿನದ ಅಂಗವಾಗಿ ತುಮಕೂರು ಹಾಲು ಒಕ್ಕೂಟ ಹಾಗೂ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆ ಮೂಲಕ ಅನೇಕ ಕುಟುಂಬಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಸಿದ್ದರಬೆಟ್ಟ ರೋಟರಿ ಸಂಸ್ಥೆಯ ಕಾಮಧೇನು ಯೋಜನೆಯಡಿ ಸುಮಾರು 240ಕ್ಕೂ ಹೆಚ್ಚು ಹಸುಗಳನ್ನು ರೈತರಿಗೆ ವಿತರಿಸಲಾಗಿದ್ದು, ಹಾಲು ಉತ್ಪಾದನೆಯ ಮೂಲಕವೇ ರೈತರು ಅದರ ವೆಚ್ಚವನ್ನು ಹಂತ ಹಂತವಾಗಿ ಮರುಪಾವತಿಸುತ್ತಿದ್ದಾರೆ ಎಂದು ತಿಳಿಸಿದರು.
ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ, ಹೈನುಗಾರಿಕೆ ಇಂದು ಗ್ರಾಮೀಣ ಆರ್ಥಿಕತೆಯ ಪ್ರಮುಖ ಆಧಾರವಾಗಿದೆ. ತುಮಕೂರು ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಹೊರರಾಜ್ಯಗಳಲ್ಲಿಯೂ ಉತ್ತಮ ಬೇಡಿಕೆ ಇದ್ದು, ರೈತರಿಗೆ ಲಾಭದಾಯಕ ಆದಾಯದ ಮೂಲವಾಗಿ ಪರಿಣಮಿಸಿದೆ ಎಂದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಸಿದ್ದಗಂಗಯ್ಯ ಮಾತನಾಡಿ, ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ತೃಪ್ತಿಯ ಜೊತೆಗೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಆಶೀರ್ವಾದದಿಂದ ರೈತರ ಸೇವೆ ಮಾಡುವ ಅವಕಾಶ ದೊರೆತಿದೆ. ಮುಂದೆಯೂ ರೈತರ ಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ಅಂತರಾಷ್ಟ್ರೀಯ ನಗೆ ಭಾಷಣಗಾರ್ತಿ ಬರಗೂರು ಸುಧಾ ಮಾತನಾಡಿ, ಹೈನುಗಾರಿಕೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿದ್ದು, ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ದೇಶದ ಹೈನುಗಾರಿಕಾ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಮಾತನಾಡಿ, ಕೃಷಿ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದ ಕಾರಣ ರೈತರು ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತಿದಿನ 11 ಲಕ್ಷ ಲೀಟರ್ಗಿಂತ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ವಾರಕ್ಕೆ ಸುಮಾರು 20 ಕೋಟಿ ರೂ. ಹಾಗೂ ವರ್ಷಕ್ಕೆ ಸುಮಾರು 1300 ಕೋಟಿ ರೂ. ರೈತರ ಕೈ ಸೇರಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ನೂರಾರು ಹಾಲು ಉತ್ಪಾದಕರು ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಅಗತ್ಯವಿರುವ ರೋಗಿಗಳಿಗೆ ಮುಂದಿನ ಚಿಕಿತ್ಸೆಗೆ ವೈದ್ಯಕೀಯ ಸಲಹೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಹಾಲು ಶೇಖರಣೆ ಮತ್ತು ತಾಂತ್ರಿಕ ವ್ಯವಸ್ಥಾಪಕ ಶ್ರೀನಿವಾಸ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಗುರುರಾಜ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಬಿಜೆಪಿ ಅಧ್ಯಕ್ಷ ರುದ್ರೇಶ್, ಡಾ. ದರ್ಶನ್, ಶಿವರುದ್ರಯ್ಯ, ಕುರುಡುಗಾನಹಳ್ಳಿ ರಂಗಣ್ಣ, ಕುಮಾರಣ್ಣ, ಮಾವತ್ತೂರು ಮಂಜುನಾಥ್, ಶಿವರಾಜು, ಅಶ್ವಥ್ನಾರಾಯಣ ರಾಜು, ರವಿವರ್ಮ ಹಾಗೂ ಒಕ್ಕೂಟದ ಅಧಿಕಾರಿಗಳಾದ ಪುಷ್ಪಲತಾ ಟಿ.ಆರ್., ರಂಜಿತ್, ಬಶೀರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
