ಕೊರಟಗೆರೆ :- ಆರ್ಥಿಕ ಸಂಕಷ್ಟಗಳ ನಡುವೆಯೂ ಶಿಕ್ಷಣದಲ್ಲಿ ಸಾಧನೆ ಮಾಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ 19ನೇ ಘಟಿಕೋತ್ಸವದಲ್ಲಿ ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮದ ಅಪೂರ್ವ ಎನ್. ಹಾಗೂ ಮಧುಗಿರಿ ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಮದ ವಿಶಾಲಾಕ್ಷಿ ರಾಜ್ಯಮಟ್ಟದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಕೊರಟಗೆರೆ ತಾಲೂಕಿನ ಬೈಚಾಪುರ ಗ್ರಾಮದ ಎಲ್. ನಾಗರಾಜು ಅವರು ಅಡುಗೆ ವೃತ್ತಿಯನ್ನು ಅವಲಂಬಿಸಿ ಕುಟುಂಬವನ್ನು ನಡೆಸುತ್ತಿದ್ದು, ಅವರ ಪುತ್ರಿ ಅಪೂರ್ವ ಎನ್. ಅವರು ಎಂ.ಎಸ್.ಸಿ. ಲೈಬ್ರರಿ ಮತ್ತು ಇನ್ಫರ್ಮೇಶನ್ ಸೈನ್ಸ್ ವಿಭಾಗದಲ್ಲಿ 5ನೇ ರ್ಯಾಂಕ್ ಗಳಿಸಿ ಕೊರಟಗೆರೆ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.

ಇದೇ ವೇಳೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ, ಚೆನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಹ್ಮದೇವರಹಳ್ಳಿ ಗ್ರಾಮದ ರೈತ ಗಂಗಾಧರಯ್ಯ ಅವರ ಪುತ್ರಿ ವಿಶಾಲಾಕ್ಷಿ ಅವರು ಗಣಿತ ವಿಭಾಗದಲ್ಲಿ 5ನೇ ರ್ಯಾಂಕ್ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಕೃಷಿಯನ್ನೇ ಅವಲಂಬಿಸಿಕೊಂಡಿರುವ ಕುಟುಂಬದ ಮಗಳು ಉನ್ನತ ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಘಟಿಕೋತ್ಸವದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಪೂರ್ವ ಹಾಗೂ ವಿಶಾಲಾಕ್ಷಿ ಅವರ ಸಾಧನೆಗೆ ಸಭಾಂಗಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂತು.
ಈ ಬಾರಿಯ ಘಟಿಕೋತ್ಸವದಲ್ಲಿ ವಿವಿಧ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳ 90 ವಿದ್ಯಾರ್ಥಿಗಳಿಗೆ 117 ಚಿನ್ನದ ಪದಕಗಳ ಮೌಲ್ಯದ ನಗದು ಬಹುಮಾನಗಳನ್ನು ವಿತರಿಸಲಾಯಿತು. ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಹಸಿರು ಜೀವನಶೈಲಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಗೋ ಗ್ರೀನ್–ಬೈಸಿಕಲ್ ಇನಿಶಿಯೇಟಿವ್’ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಹೆಚ್.ಎಸ್. ಮೋಹನ, ಹಿರಿಯ ಡೀನ್ ಪ್ರೊ. ಹೆಚ್. ನಾಗಭೂಷಣ, ವಿವಿಧ ನಿಕಾಯಗಳ ಡೀನರು, ವಿದ್ಯಾವಿಷಯಕ ಪರಿಷತ್ ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.
ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಅಪೂರ್ವ ಮತ್ತು ವಿಶಾಲಾಕ್ಷಿ ಅವರ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಪರಿಶ್ರಮ, ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸಕ್ಕೆ ಉತ್ತಮ ಉದಾಹರಣೆಯಾಗಿದ್ದು, ಜಿಲ್ಲೆಯ ಯುವಜನತೆಗೆ ಪ್ರೇರಣೆಯಾಗಿದೆ.
-ಶ್ರೀನಿವಾಸ್ ಕೊರಟಗೆರೆ.
