ಹಾಸನ, ಜೂ. 5: ನಗರದ ಸರ್ಕಾರಿ ಜುಮ್ಮಾ ಮಸೀದಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವಾಧ್ಯಕ್ಷ ರವಿನಾಕಲಗೂಡು ಅವರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ವಿಶ್ವ ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ಪ್ರತಿಯೊಬ್ಬರೂ ನಿರಂತರವಾಗಿ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಜಾಗತಿಕ ಮಟ್ಟದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂದಿನ ಯುವಜನಾಂಗದಲ್ಲಿ ಪರಿಸರ ಜಾಗೃತಿ ಮೂಡಿಸದಿದ್ದರೆ ಜೀವಸಂಕುಲಕ್ಕೆ ಅಪಾಯ ಎದುರಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ. ನಾಯಕರಹಳ್ಳಿ ಮಂಜೇಗೌಡ, ಹಿರಿಯ ಸಾಹಿತಿ ಗೊರೂರು ಅನಂತರಾಜು, ಕದಂಬ ಸೇನೆ ಜಿಲ್ಲಾಧ್ಯಕ್ಷ ಅಂಕಪುರ ಗಣೇಶ್, ದರ್ಪಣ ಪತ್ರಿಕೆಯ ಸಂಪಾದಕ ದೊಡ್ಡಬಾಗನಹಳ್ಳಿ ಗೋಪಾಲ್, ಸಿರಿ ಕನ್ನಡ ಪತ್ರಿಕೆಯ ಸಂಪಾದಕ ಹಾಗೂ ಸಿರಿಗನ್ನಡ ವೇದಿಕೆ ಹಾಸನ ಜಿಲ್ಲಾಧ್ಯಕ್ಷ ಆನಂದ ಪಟೇಲ್ ನೆಲ್ಲಿಗೆರೆ, ಉಪನ್ಯಾಸಕ ಪ್ರಕಾಶ್, ಶಿಕ್ಷಣ ಸಂಯೋಜಕ ಅವೇಜ್ ಪಾಷ, ಸಮಾಜಸೇವಕರಾದ ವಿಜಯಕುಮಾರ್, ನೂರ್ ಅಹ್ಮದ್, ಶಿಕ್ಷಕರಾದ ಷನಾಜ್ ಬೇಗಂ, ಶಬ್ರೀನ್ ಖಾನಂ, ನಿವೃತ್ತ ಶಿಕ್ಷಕ ಅಹ್ಮದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
