ಆಲೂರು : ನಾವೆಲ್ಲಾ ಪರಿಸರದ ಒಂದು ಭಾಗ. ಪರಿಸರದ ಕಾಳಜಿ, ಜಾಗೃತಿ, ಉನ್ನತಿ ನಮ್ಮ ನಿತ್ಯ ಕರ್ತವ್ಯವಾಗಬೇಕು. ಪರಿಸರ ದಿನಾಚರಣೆ ಕೇವಲ ಜೂನ್ ೫ಕ್ಕೆ ಮಾತ್ರ ಸೀಮಿತವಾಗದೇ ನಿರಂತರ ಪ್ರಕ್ರಿಯೆಯಾಗಬೇಕು ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ಆಲೂರು ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಅವರು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು, ಏಕಲವ್ಯ ಮುಕ್ತದಳ ಹಾಸನ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈರಾಪುರ ಸ್ಕೌಟ್ಸ್ ಗೈಡ್ಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ ಪರಿಸರ ದಿನಾಚರಣೆ ಕೇವಲ ಪ್ರಚಾರಕ್ಕೆ ಅಥವಾ ಫೋಟೋಗಾಗಿ ಮಾಡುವುದಲ್ಲ ಹಸಿರು ನಿರ್ಮಾಣ ನಿರಂತರ ಪ್ರಕ್ರಿಯೆಯಾಗಬೇಕು. ಭಾರತ್ ಸ್ಕೌಟ್ಸ್ ಗೈಡ್ಸ್ ವರ್ಷದುದ್ದಕ್ಕೂ ಪ್ರಕೃತಿಯ ಸೇವಾ ಕೈಂಕರ್ಯದಲ್ಲಿ ತೊಡಗಿರುತ್ತದೆ. ಏಕಲವ್ಯ ಮುಕ್ತ ದಳದ ರೋವರ್ ನಾಯಕ ಆರ್.ಜಿ. ಗಿರೀಶ್ ಹಾಗೂ ನಿವೇದಿತಾ ಮುಕ್ಯ ದಳದ ನಾಯಕಿ ಎಚ್.ಜಿ. ಕಾಂಚನಮಾಲರವರ ನಿರಂತರ ಕೊಡುಗೆ ಅನನ್ಯವಾದುದು. ಭಾರತ್ ಸ್ಕೌಟ್ಸ್ ಗೈಡ್ಸ್ ಪರಿಸರ ದಿನಾಚರಣೆಯನ್ನು ಕೇವಲ ವೇದಿಕೆಗೆ ಸೀಮಿತಗೊಳಿಸದೇ ಕಾಯಕವನ್ನಾಗಿಸಿಕೊಂಡಿದೆ. ಗಿಡ ನೆಡುವ ಕಾರ್ಯಕ್ರಮಗಳು, ಬೀಜದುಂಡೆಗಳ ತಯಾರಿಕೆ, ಕಲ್ಯಾಣಿಗಳ ಸ್ವಚ್ಛತೆ, ದೇವಾಲಯಗಳ ಸ್ವಚ್ಛತೆ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುವ ಮಿಖೇನ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಏಕಲವ್ಯ ರೋವರ್ ಮುಕ್ತದಳದ ನಾಯಕ ಆರ್.ಜಿ.ಗಿರೀಶ್ ಮಾತನಾಡಿ ಪ್ರಕೃತಿ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತಲೂ ಪ್ರಕೃತಿಗಾಗಿ ನಾವೇನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಅರಣ್ಯ ಇಲಾಖೆಯ ಸಹಕಾರ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ಪ್ರತಿವರ್ಷ ಮೂರರಿಂದ ಐದು ಸಾವಿರ ಗಿಡಗಳನ್ನು ಅರಣ್ಯೀಕರಣ ಮಾಡುತ್ತಾ ಬಂದಿದ್ದೇವೆ. ಹಾಕಿದ ಗಿಡಗಳ ಹಾರೈಕೆಯ ಬಗ್ಗೆಯೂ ಕ್ರಮ ವಹಿಸಿದ್ದೇವೆ. ಗಿಡಗಳನ್ನು ನೆಟ್ಟಾಕ್ಷಣ ನಮ್ಮ ಕೆಲಸ ಮುಗಿಯುವುದಿಲ್ಲ ಅವುಗಳನ್ನು ಪೋಷಿಸುವ ಜವಬ್ದಾರಿಯು ನಮ್ಮ ಮೇಲಿದೆ ಎಂದರು.
ಸಕಲೇಶಪುರ ರೋಟರಿ ಶಾಲೆಯ ಎ.ಎಲ್.ಟಿ. ನಾಯಕಿ ಕಾಂತಾಮಣಿ ಮಾತನಾಡಿ ಪರಿಸರ ಎಂದರೆ ಕೇವಲ ಗಿಡಮರ ಮಾತ್ರವಲ್ಲ. ನಮ್ಮ ಸುತ್ತಮುತ್ತಲಿರುವ ಜೈವಿಕ ಹಾಗೂ ಅಜೈವಿಕ ಅಂಶಗಳೆಲ್ಲವೂ ಪರಿಸರದ ಭಾಗಗಳಾಗಿವೆ. ಆದ್ದರಿಂದ ಭೂಮಿ, ನೀರು, ಗಾಳಿ ಸೇರಿದಂತೆ ಮುಳಭೂತ ಸಂಪನ್ಮೂಲಗಳನ್ನೆಲ್ಲಾ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ ನಾಯಕಿ ಅಶ್ವಿನಿ, ಲೇಡಿ ಸ್ಕೌಟ್ ಮಾಸ್ಟರ್ ರೇಣುಕಾ ಮೋಹನ್, ಎಸ್. ಪಬ್ಲಿಕ್ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ರೋಸ್ ಮೇರಿ, ಹರ್ಷಿತಾ, ಗೈಡ್ ಕ್ಯಾಪ್ಟನ್ ಚೈತ್ರ; ಝಾನ್ಸಿ ವಿದ್ಯಾಸಂಸ್ಥೆಯ ಗೈಡ್ ಕ್ಯಾಪ್ಟನ್ ಪಲ್ಲವಿ, ಏಕಲವ್ಯ ಮುಕ್ತದಳದ ಗೈಡ್ ನಾಯಕಿಯರಾದ ಶಿಲ್ಪ, ಪದ್ಮಾವತಿ ವೆಂಕಟೇಶ್, ಭೂಮೇಶ್, ನಾಗರತ್ನ, ಹರ್ಷಿತ, ಸುದೀಪ್, ಅವಿನಾಶ್, ನಾರಾಯಣಗೌಡ, ಲಿಖಿತ್ ಮುಂತಾದವರು ಉಪಸ್ಥಿತರಿದ್ದರು.
